ಲಾರಿಗೆ ಬಸ್ ಢಿಕ್ಕಿ ಮೂವರ ಸಾ*ವು

Bus accident
Published on

ಯಲ್ಲಾಪುರ:ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, 7 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ನಡೆದಿದೆ.

ಬಾಗಲಕೋಟೆಯ ಗುಳೇದಗುಡ್ಡದ ನೀಲವ್ವ ಯಲದುರ್ಗಪ್ಪ ಹರದೊಳ್ಳಿ (40), ಗಿರಜವ್ವಾ ಅಯ್ಯಪ್ಪ ಬೂದನ್ನವರ್ (30) ಮೃತಪಟ್ಟವರು. ಮೃತನಾದ ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಬಾಗಲಕೋಟೆಯ ಹುನಗುಂದದ ಚಿದಾನಂದ ರಮೇಶ ಕಿತ್ತಳಿ, ಅಮೀನಗಡದ ಮಲ್ಲಪ್ಪ ಯಮನಪ್ಪ ಕತ್ತಿ, ಮಂಜುಳಾ ಗಾಳೆಪ್ಪ ಹಳಬರ, ಮಲ್ಲಿಕಾರ್ಜುನ ಫಕೀರಪ್ಪ ಆಂದಲಿ, ದೇವಕಿ ಹನುಮಂತ ಬೆಳ್ಳಿ, ಗಿಡ್ಡನಾಯಕನಾಳದ ಸಮೀರಾಬೇಗಂ ಇಮಾಮ ಸಾಬ ಹೊಸಮನಿ, ರಕ್ಕಸಂಗಿಯ ಹನೀಫಾ ಮಹಮ್ಮದ್ ಅಲಿ ಬೇಗಂ ಗಾಯಗೊಂಡವರು.

ಅಮೀನಗಡದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಬಸ್ ಹಿಟ್ಟಿನಬೈಲ್ ಕ್ರಾಸ್ ಬಳಿ ರಸ್ತೆಯ ಮೇಲೆ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ ಚಾಲಕ ಹಾಗೂ ಲಾರಿ ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net