ವಿನಯ ಕುಲಕರ್ಣಿ ಮನೆ ಎದುರು ಪಟಾಕಿ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

15 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಹಾಲು ಒಕ್ಕೂಟ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಪರಾಭವಗೊಂಡ ನಂತರ ಕೆಲವರು ಅವರ ನಿವಾಸದ ಎದುರು ಪಟಾಕಿ ಸಿಡಿಸಿದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅಧ್ಯಕ್ಷ ಸ್ಥಾನಕ್ಕೆ ಜು. 12ರಂದು ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಶಿವಲೀಲಾ ಕುಲಕರ್ಣಿ ಬಿಜೆಪಿ ಬೆಂಬಲಿತ ಶಂಕರ ಮುಗದ ವಿರುದ್ಧ ಪರಾಭವಗೊಂಡಿದ್ದರು. ಅಂದು ಸಂಜೆ ಕೆಲವರು ಅವರ ಮನೆ ಎದುರು ಪಟಾಕಿ ಸಿಡಿಸಿದ್ದರು. ಸರವನ್ನು ಕೈಯಲ್ಲಿ ಹಿಡಿದು ತಿರುಗಾಡುತ್ತ ಪಟಾಕಿ ಸಿಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಸಂಬ0ಧ ಉಪನಗರ ಠಾಣೆ ಪೊಲೀಸರು ಪಟಾಕಿ ಸಿಡಿಸಿದ ರಾಜೇಸಾಬ ಅಲಗೂರ ಎಂಬಾತನನ್ನು ಸೋಮವಾರ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದರು. ಈತ ಅಂಜುಮನ್ ಸಂಸ್ಥೆಯ ವ್ಯವಸ್ಥಾಪನಾ ಮಂಡಳಿ ಸದಸ್ಯ. ಸುದ್ದಿ ತಿಳಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿ ಮುಖಂಡರು ಠಾಣೆ ಎದುರು ಜಮಾಯಿಸಿ ರಾಜೇಸಾಬನನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪಟಾಕಿ ಸಿಡಿಸಿದ್ದಕ್ಕೆ ಭಯೋತ್ಪಾದಕನನ್ನು ಕರೆದುಕೊಂಡು ಹೋದಂತೆ ಪೊಲೀಸರು ರಾಜೇಸಾಬನನ್ನು ಬೆಳ್ಳಂಬೆಳಗ್ಗೆ ಕರೆದುಕೊಂಡು ಹೋಗಿದ್ದಾರೆ. ಪಟಾಕಿ ಹೊಡೆದವರನ್ನು ಪೊಲೀಸರು ವಶಕ್ಕೆ ಪಡೆಯುವುದಾದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರೆಲ್ಲ ಸೇರಿ ಮುಕ್ತವಾಗಿ ಪಟಾಕಿ ಹೊಡೆಯುತ್ತೇವೆ. ಪೊಲೀಸರು ಎಷ್ಟು ಜನರನ್ನು ಬಂಽಸುತ್ತಾರೋ ನೋಡೋಣ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸವಾಲು ಹಾಕಿದರು.
ರಾಜೇಸಾಬ ಅಲಗೂರ ಪಟಾಕಿ ಸರವನ್ನು ಕೈಯಲ್ಲಿ ಹಿಡಿದು ತಿರುಗಾಡಿದ್ದಾನೆ. ಅದು ಅವನ ಹಾಗೂ ಇತರರ ಜೀವಕ್ಕೂ ಅಪಾಯಕಾರಿ. ಹೀಗಾಗಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದೇವೆ. ವಿಚಾರಣೆಯ ನಂತರ ಕಳುಹಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ ಅಂಜುಮನ್ ಸಂಸ್ಥೆಯ ಸದಸ್ಯರು ಸ್ಥಳದಿಂದ ವಾಪಸ್ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net