

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಒಂದೆಡೆ ಶಿವನ ಪ್ರತಿಮೆ, ಸುತ್ತಲೂ ಹೂದೋಟ. ಈ ಚಿತ್ರಣ ಕಂಡು ಬರುವುದು ಬೆಳ್ಮಣ್‌ನ ಜಂತ್ರದಲ್ಲಿ ನವೀಕರಣಗೊಂಡ ಹಿಂದು ರುದ್ರಭೂಮಿಯಲ್ಲಿ.
ಬೆಳ್ಮಣ್ ರೋಟರಿ ಸಂಸ್ಥೆ ಮುಂದಾಳತ್ವದಲ್ಲಿ ದಾನಿಗಳ ನೆರವು ಹಾಗೂ ಸರ್ಕಾರದ ಅನುದಾನದಲ್ಲಿ ಸುಂದರ ರುದ್ರಭೂಮಿ ನಿರ್ಮಾಣವಾಗಿದೆ. ಪರಿಸರದಲ್ಲಿ ಈ ಹಿಂದೆ ಇದ್ದ ರುದ್ರಭೂಮಿ ಶಿಥಿಲಗೊಂಡಿದ್ದರಿಂದ ಮೃತದೇಹ ದಹನಕ್ಕೆ ಪಕ್ಕದ ಊರನ್ನು ಅವಲಂಬಿಸಬೇಕಿತ್ತು. ರೋಟರಿ ಸಂಸ್ಥೆ ಮುಂದಾಳತ್ವದಲ್ಲಿ ಹಳೇ ರುದ್ರಭೂಮಿ ಇರುವಲ್ಲಿ ಹೊಸದರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ರುದ್ರಭೂಮಿ ಒಳ ಪ್ರವೇಶಿಸುತ್ತಿದ್ದಂತೆ ಕಲ್ಲಿನ ರಾಶಿಗಳ ಮಧ್ಯೆ ಕುಳಿತ ಶಿವನ ಪ್ರತಿಮೆ ಎಲ್ಲರನ್ನೂ ಆಕರ್ಷಿಸುತ್ತದೆ. ಇತರ ಪ್ರತಿಮೆಗಳು ಮತ್ತು ರುದ್ರಭೂಮಿ ಸುತ್ತ ಹೂದೋಟ ಕಣ್ಣಿಗೆ ಮುದ ನೀಡುತ್ತದೆ.
ರೋಟರಿ ಬೆಳ್ಮಣ್‌ನ ಈ ಹಿಂದಿನ ಅಧ್ಯಕ್ಷ ರಣೀಶ್ ಆರ್.ಶೆಟ್ಟಿ ನೇತೃತ್ವದ ಸಮಿತಿ ಪೇಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಪ್ರಸ್ತುತ ವರ್ಷದ ಅಧ್ಯಕ್ಷ ಸಜೇಶ್ ನಾಯಕತ್ವದಲ್ಲಿ ವಿವಿಧ ದಾನಿಗಳು ಸಹಕಾರದಲ್ಲಿ ಮಾದರಿ ರುದ್ರಭೂಮಿ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ವಿ.ಸುನೀಲ್ ಕುಮಾರ್, ಸಂಸದರ ನಿಧಿಯಿಂದ ಜಿಪಂ ಹಾಗೂ ತಾಪಂ, ಸ್ಥಳೀಯ ಗ್ರಾಪಂ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಅನುದಾನ ನೀಡಿವೆ. ರೋಟರಿ ಸಂಸ್ಥೆಯ ಸೂರ್ಯಕಾಂತ್ ಶೆಟ್ಟಿ, ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೊ ನಿರ್ಮಾಣದ ರೂವಾರಿಗಳು.
ಇಂದು ಉದ್ಘಾಟನೆ: ಗ್ರಾಮದ ಜನರಿಗೆ ಅನುಕೂಲಕ್ಕೆ ಜಂತ್ರದಲ್ಲಿ ನಿರ್ಮಾಣಗೊಂಡ ಹಿಂದು ರುದ್ರಭೂಮಿ ವಿಶೇಷ ಹೊಂದಿದ್ದು ಜೂನ್ 10ರ ಮಧ್ಯಾಹ್ನ 4ಕ್ಕೆ ಉದ್ಘಾಟನೆಗೊಳ್ಳಲಿದೆ. ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸುವರು.
ಈ ಹಿಂದೆ ಇದ್ದ ರುದ್ರಭೂಮಿ ವ್ಯವಸ್ಥೆಯಿಲ್ಲದೆ ಪಾಳುಬಿದ್ದಿತ್ತು. ಹೀಗಾಗಿ ರೋಟರಿ ಸಂಸ್ಥೆ ಮುಂದಾಳತ್ವದಲ್ಲಿ ಇಲ್ಲಿ ನೂತನ ರುದ್ರಭೂಮಿ ನಿರ್ಮಾಣಕ್ಕೆ ಮುಂದಾಗಿದ್ದೆವು. ಈಗ ಸುಂದರ ರುದ್ರಭೂಮಿ ನಿರ್ಮಾಣವಾಗಿದ್ದು ಇತರ ಗ್ರಾಮಗಳಿಗೂ ಮಾದರಿಯಾಗುವಂತಿದೆ. ಸೂರ್ಯಕಾಂತ್ ಶೆಟ್ಟಿ ರೋಟರಿ ಸಂಸ್ಥೆ ಮಾಜಿ ಸಹಾಯಕ ಗವರ್ನರ್ ಜನಪ್ರತಿನಿಧಿಗಳ ಹಾಗೂ ದಾನಿಗಳ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಈ ರುದ್ರಭೂಮಿಯ ನಿರ್ಮಾಣ ಮಾಡಿದ್ದೇವೆ. ಸ್ಮಶಾನದ ಸುತ್ತ ಹೂದೋಟ, ಇಂಟರ್‌ಲಾಕ್ ಹಾಗೂ ವಿವಿಧ ಪ್ರತಿಮೆಗಳನ್ನು ಅಳವಡಿಸಲಾಗಿದೆ. ದೇವೇಂದ್ರ ಶೆಟ್ಟಿ ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ