ಸುಟ್ಟು ಹೋದ ಎಲೆಕ್ಟ್ರಿಕ್ ಸ್ಕೂಟರ್, ಶಾಮಿಯಾನ ಸಾಮಗ್ರಿ

30 mlv 1
ಮಳವಳ್ಳಿಯ ಎನ್‌ಇ ಎಸ್ ಬಡಾವಣೆಯಲ್ಲಿರುವ ಶಾಮಿಯಾನ ಗೋದಾಮಿನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಶಾಮಿಯಾನ ಸಾಮಗ್ರಿಗಳು ಸುಟ್ಟು ಹೋಗಿರುವುದು.
Published on

ಮಳವಳ್ಳಿ: ಪಟ್ಟಣದ ಶಾಮಿಯಾನ ಗೋದಾಮಿನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಕೂಟರ್ ಸೇರಿದಂತೆ ಶಾಮಿಯಾನ ಸಾಮಗ್ರಿಗಳು ಸುಟ್ಟು ಹೋಗಿವೆ.

ಪಟ್ಟಣದ ಎನ್‌ಇಎಸ್ ಬಡಾವಣೆಯ ಅನಿತಾ ಕಾನ್ವೆಂಟ್ ರಸ್ತೆಯಲ್ಲಿರುವ ವರುಣ್ ಶಾಮಿಯಾನ ಸೆಂಟರ್ ಗೋದಾಮಿನಲ್ಲಿ ಅವಘಡ ನಡೆದಿದೆ. ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡು ಈ ಅವಾಂತರಕ್ಕೆ ಕಾರಣವಾಗಿದೆ.

ಮಾಲೀಕ ಉಮೇಶ್ ಎಂದಿನಂತೆ ಕೆಲಸ ಮುಗಿಸಿ ಗೋದಾಮಿನಲ್ಲಿ ಸೋಮವಾರ ರಾತ್ರಿ ಬೈಕ್ ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗಿನ ಜಾವ 5 ಗಂಟೆಯಲ್ಲಿ ಅಂಗಡಿ ಒಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸುತ್ತಲಿನ ನಿವಾಸಿಗಳು ಉಮೇಶ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದು ಬಾಗಿಲು ತೆರೆದು ನೋಡಿದಾಗ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿಯುತ್ತಿತ್ತು. ಇದರಿಂದಾಗಿ ಪಕ್ಕದಲ್ಲಿದ್ದ ಶಾಮಿಯಾನ ಸಾಮಗ್ರಿಗಳಿಗೂ ಬೆಂಕಿಜ್ವಾಲೆ ಆವರಿಸಿತ್ತು. ಕೂಡಲೇ ಅಗ್ನಿಶಾಮಕ ಕಚೇರಿಗೆ ಕರೆಮಾಡಿ ಸ್ಥಳೀಯರ ಸಹಕಾರದಿಂದ ಬೆಂಕಿಯ ಜ್ವಾಲೆ ಬೇರೆಡೆಗೆ ಹರಡದಂತೆ ಮುಂಜಾಗ್ರತೆಗೆ ವಹಿಸಿದರು. ಅಷ್ಟರಲ್ಲಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.

ಅವಘಡಕ್ಕೆ ಕಾರಣವಾದ ಸ್ಕೂಟರ್ ಕಂಪನಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಪೂರಕವಾಗಿ ಸ್ಪಂದಿಸದಿದ್ದರೆ ಕಂಪನಿ ವಿರುದ್ಧ ದೂರು ದಾಖಲಿಸುವುದಾಗಿ ಮಾಲೀಕ ಉಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net