

ಬಸವಾಪಟ್ಟಣ: ಯುವಪೀಳಿಗೆ ಮದ್ಯ ವ್ಯಸನದಂತಹ ದುಶ್ಚಟಗಳಿಗೆ ದಾಸರಾಗಿ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬಸವಾಪಟ್ಟಣ ಗವಿಮಠದ ಶ್ರೀ ಶಿವಕುಮಾರ ಹಾಲ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಸಮೀಪದ ಶ್ಯಾಗಲೆ ಗ್ರಾಮದ ಕರಿಸಿದ್ಧೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ 1727ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಬಿರದ ಮೂಲಕ ಮನ ಪರಿವರ್ತನೆ ಮಾಡಿ ಲಕ್ಷಾಂತರ ಮದ್ಯ ವ್ಯಸನಿಗಳ ವ್ಯಸನ ಬಿಡಿಸಿ ಅವರ ಕುಟುಂಬಗಳಿಗೆ ಆಧಾರವಾಗಿ ನಿಲ್ಲುವ ಕೆಲಸವನ್ನು ಶ್ರೀ ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ದುಶ್ಚಟಕ್ಕೆ ದಾಸರಾಗದೆ ದುರ್ಜನರ ಸಂಗ ಮಾಡದೆ ಸಜ್ಜನರ ಸಂಗ ಮಾಡಿ ಬದುಕನ್ನು ಸುಂದರವಾಗಿಸಿ ಕೊಂಡಾಗ ಮಾತ್ರ ಇಂತಹ ಶಿಬಿರಗಳನ್ನ ಮಾಡಿದ್ದಕ್ಕೆ ಸಾರ್ಥಕತೆ ಬರುತ್ತದೆ ಎಂದು ಸ್ವಾಮೀಜಿ ನುಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ಹಾಲು ಕುಡಿದವನು ಸದಾ ನಲಿಯುತ್ತಾ ಇರುತ್ತಾನೆ. ಆಲ್ಕೋಹಾಲ್ ಕುಡಿದವನು ಸದಾ ನುಲಿತಾ ಇರುತ್ತಾನೆ. ಇಲ್ಲಿಯವರೆಗೂ ಹೊರಗೆ ನುಲಿತಾ ಇದ್ದಂತಹ ನಿಮಗೆ ಹೊಸ ಬದುಕನ್ನು ಕಟ್ಟಿಕೊಟ್ಟು ನಲಿಯುವಂತಹ ಸಂಸ್ಕಾರ ಕಟ್ಟಿಕೊಡುವ ನಿಟ್ಟಿನಲ್ಲಿ ಈ ಮದ್ಯವರ್ಜನ ಶಿಬಿರ ತುಂಬಾ ಸಹಕಾರಿಯಾಗಿದೆ ಎಂದರು.
ಎಂಪಿ ಜಿಎಂ ಸಿದ್ದೇಶ್ವರ, ಉದ್ಯಮಿ ಜಿ.ಎಸ್. ಶ್ಯಾಮ್, ಕಸಾಪ ಮಾಜಿ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ, ಗ್ರಾಮದ ಮುಖಂಡ ಎಂ.ದೇವೇಂದ್ರಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ವಿ. ಮೂರ್ತಯ್ಯ ಮಾತನಾಡಿದರು. ಶಿಬಿರದಲ್ಲಿ 60 ಮದ್ಯ ವ್ಯಸನಿಗಳು ವ್ಯಸನ ಮುಕ್ತರಾಗಲು ಭಾಗವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ಶೋಭಮ್ಮ ರಾಜಪ್ಪ, ಉಪಾಧ್ಯಕ್ಷೆ ಪಾರ್ವತಮ್ಮ ಅಡಿವೆಪ್ಪ, ಸದಸ್ಯೆ ಸುಧಾ ಅಂಜನಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಎಸ್ ಎಚ್ ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್, ಪಿಎಸ್‌ಐ ಸಂಜೀವ್ ಕುಮಾರ್, ಶಿಬಿರಾಧಿಕಾರಿ ದಿವಾಕರ್, ದೇವನಗರಿ ಯೋಜನಾಧಿಕಾರಿ ಬಾಲಕೃಷ್ಣ.ಬಿ., ಮೇಲ್ವಿಚಾರಕ ಉಮೇಶ್ ಇತರರಿದ್ದರು.