ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ

Rajypalaru
ಕೆ.ಆರ್.ಪೇಟೆಯಲ್ಲಿ ತಾಲೂಕು ಕಾಂಗ್ರೆಸ್ ಘಟಕ, ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಹಾಗೂ ತಾಲೂಕು ಕುರುಬರ ಸಂಘದ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರ ಪ್ರತಿಕೃತಿಯನ್ನು ದಹಿಸಿದರು.
Published on

ಕೆ.ಆರ್.ಪೇಟೆ: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ತಾಲೂಕು ಕಾಂಗ್ರೆಸ್ ಘಟಕ, ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಹಾಗೂ ತಾಲೂಕು ಕುರುಬರ ಸಂಘದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ರಾಜ್ಯಪಾಲರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ಥಾವರ ಚಂದ್ ಗೆಹಲೋತ್ ಅವರ ಪ್ರತಿಕೃತಿಗೆ ಬೆಂಕಿ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕ ಹುದ್ದೆಯಾಗಿದೆ. ಆದರೆ ರಾಜ್ಯಪಾಲರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾನಿರತರು, ಮೈಸೂರು-ಶಿವಮೊಗ್ಗ ಮತ್ತು ಕೆ.ಆರ್.ಪೇಟೆ-ಬೇರ್ಯ ಮುಖ್ಯ ರಸ್ತೆ ತಡೆದು, ತನಿಖೆಗೆ ಅವಕಾಶ ನೀಡಿ ಆದೇಶ ನೀಡಿರುವ ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಕೂಡಲೇ ತಮ್ಮ ಆದೇಶವನ್ನು ರಾಜ್ಯಪಾಲರು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ತಾಲೂಕು, ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೋಡಿಮಾರನಹಳ್ಳಿ ದೇವರಾಜು ಮಾತನಾಡಿ, ಸಂವಿಧಾನ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲ ಗೆಹಲೋತ್ ಅವರನ್ನು ಕೂಡಲೇ ಕೇಂದ್ರವು ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸಿದ್ದರಾಮಯ್ಯ ಅಭಿಮಾನಿಗಳು ತೀವ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ತಾಲೂಕು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೋಡಿಮಾರನಹಳ್ಳಿ ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್, ಯುವ ಘಟಕದ ಅಧ್ಯಕ್ಷ ಲಕ್ಷ್ಮೀಪುರ ಅಶೋಕ್‌ಕುಮಾರ್, ಜಿಪಂ ಮಾಜಿ ಸದಸ್ಯ ಎಲ್.ಕೆ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿವಾಕರ್, ಮುಖಂಡರಾದ ಕೆ.ಆರ್.ರವೀಂದ್ರಬಾಬು, ಬಸ್ತಿ ರಂಗಪ್ಪ, ರಾಜಯ್ಯ, ಸಣ್ಣನಿಂಗೇಗೌಡ, ಶ್ಯಾಮಣ್ಣ, ಎಲ್.ಪಿ.ನಂಜಪ್ಪ, ಲಕ್ಷ್ಮೀಪುರ ಚಂದ್ರೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮಡುವಿನಕೋಡಿ ಕಾಂತರಾಜ್, ಸ್ನೇಹಿತ ರಮೇಶ್, ಡಿ.ಪ್ರೇಮಕುಮಾರ್, ಬಳ್ಳೇಕೆರೆ ವಿಜಯ್‌ಕುಮಾರ್, ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ದೊಡ್ಡಗಾಡಿಗನಹಳ್ಳಿ ಲೋಕೇಶ್, ಕೆಎಸ್‌ಆರ್‌ಟಿಸಿ ಶಿವಣ್ಣ, ಮಾಕವಳ್ಳಿ ಸುಮಿತ್, ಮಾರ್ಗೋನಹಳ್ಳಿ ಪ್ರದೀಪ್, ಯೋಗೇಶ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net