

ಕಂಪ್ಲಿ: ಪಟ್ಟಣದಲ್ಲಿ ಮೊಹರಂ ಕೊನೆಯ ದಿನ ಭಾನುವಾರ ಪೀರಲು ದೇವರ ದಫನ್ ಮೆರವಣಿಗೆ ಸಡಗರ ಸಂಭ್ರಮಗಳಿಂದ ನಡೆಯಿತು. ಇದರಿಂದ ಮೊಹರಂ ಹಬ್ಬಕ್ಕೆ ತೆರೆಬಿದ್ದಿದೆ.
ಪಟ್ಟಣದಲ್ಲಿನ 18ಮಸೀದಿಗಳ ಪೀರಲು ದೇವರುಗಳು ಇಲ್ಲಿನ ನಡುವಿನ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ ಹಸೇನ್-ಹುಸೇನ್, ಕವಡೆಪೀರ್, ಮೌಲಾಲಿತಾತ, ಇಮಾಂ ಖಾಸೀಮ್ ಅಲಿ, ಅಲಿಅಕ್ಬರ್, ಸಣ್ಣ ಕವಡೆಪೀರ್ ಪೀರಲು ದೇವರಿಗೆ ಅಲಾಯ್ ಬಿಲಾಯ್ (ದರ್ಶನ)ಕೊಡುವ ಮೂಲಕ ಮೆರವಣಿಗೆ ಹೊರಟವು.
ಇಸ್ಲಾಂ ಧರ್ಮದ ಪ್ರಕಾರ ಶಾಸ್ತ್ರೋಕ್ತವಾಗಿ ಮೊಹರಂ ಹಬ್ಬ ನಡೆಸಿದ್ದು, ಕೋಟೆಯ ಹುಸೇನ್ ದೊಡ್ಡ ಮಸೀದಿಯ ಪೀರಲು ದೇವರು ಬಂದು ದರ್ಶನ ಕೊಟ್ಟ ನಂತರವೇ ಉಳಿದ ಪೀರಲು ದೇವರು ದರ್ಶನ ಪಡೆದಿವೆ. ದರ್ಶನಕ್ಕೆ ಬಂದ ಪೀರಲು ದೇವರಿಗೆ ಲೋಬಾನದ ಹೊಗೆ, ನವಿಲುಗರಿ ಸೇವೆ ಮೂಲಕ ಪೂಜೆ ಸಲ್ಲಿಸಿದೆ. ಫತ್ಯ(ಗುಣಗಾನ) ಹೊದಿಕೆ ನಂತರ ಪೀರಲು ದೇವರ ವಿಸರ್ಜನಾ ಮೆರವಣಿಗೆ ನಡೆಯಿತು ಎಂದು ಇಲ್ಲಿನ ನಡುವಿನ ಮಸೀದಿಯ ಅಲಂಬರ್ದರ್ ಜಾಫರ್ ತಿಳಿಸಿದರು.
ತಾಲೂಕಿನಾದ್ಯಂತ ಮೊಹರಂ ಹಬ್ಬ ಶಾಂತಿಯುತವಾಗಿ ನಡೆದಿದೆ. ಸೋಮವಾರ ಉಪ್ಪಾರಹಳ್ಳಿಯಲ್ಲಿ ಪೀರಲು ದೇವರ ದಫನ್ ಮೆರವಣಿಗೆ ನಡೆಯಲಿದ್ದು ಎಂಟು ಜನ ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ ಎಂದು ಪಿಐ ಕೆ.ಬಿ.ವಾಸುಕುಮಾರ್ ತಿಳಿಸಿದರು.