ಕಳ್ಳರಿಬ್ಬರ ಬಂಧನ, ಐದು ಜೀವಂತ ಗುಂಡು ವಶ

17-Jaggu9-Web
ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಚಿನ್ನಾಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಸುನೀಲಕುಮಾರ ನಂದೇಶ್ವರ, ಪಿಎಸ್‌ಐ ಆನಂದ ಅದಗೊಂಡ ಮತ್ತು ಸಿಎಚ್‌ಸಿ ಬಿ.ಎ. ಚೌಗಲಾ, ವೈ.ವೈ. ತಳೆವಾಡ, ಸಿ.ಎಂ. ಹುಣಶ್ಯಾಳ, ಎಂ.ಎಸ್. ಗಾಡವಿ, ಎಂ.ಎನ್. ಚಿಪ್ಪಲಕಟ್ಟಿ ಇತರರಿದ್ದಾರೆ.
Published on

ಬೆಳಗಾವಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಹಾಪುರ ಸರಸ್ವತಿ ನಗರದ ಪ್ರಕಾಶ ಪಾಟೀಲ (30) ಮತ್ತು ಪಶ್ಚಿಮ ಬಂಗಾಳದ ಪರ್ಗಾನಸ್ ಜಿಲ್ಲೆಯ ಕಾಲಿತಲಾ ಗ್ರಾಮದ ನಿತೈ ಖಾಲಿಪದ ಮಂಡಲ (41) ಬಂಧಿತರು.

ಅವರಿಂದ 42.40 ಲಕ್ಷ ರೂ. ಮೌಲ್ಯದ 848 ಗ್ರಾಂ. ಚಿನ್ನಾಭರಣ, 8 ಲಕ್ಷ ರೂ. ಮೌಲ್ಯದ ಕಾರು, ಕಂಟ್ರಿ ಪಿಸ್ತೂಲ್, ಐದು ಜೀವಂತ ಗುಂಡುಗಳು ಮತ್ತು ಕಳವು ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ 51.60 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ತಾಲೂಕಿನ ಝಾಡಶಹಾಪುರ ಗ್ರಾಮದಲ್ಲಿ ಡಿ. 6ರಂದು ಮನೆಯೊಂದರಲ್ಲಿ ಕಳವು ಮಾಡುತ್ತಿದ್ದ ಕಾಲಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರನ್ನು ವಿಚಾರಣೆಗಾಗಿ ಡಿ. 8ರಂದು ವಶಕ್ಕೆ ಪಡೆದಿದ್ದರು. ಗ್ರಾಮೀಣ, ಎಪಿಎಂಸಿ, ಕ್ಯಾಂಪ್, ಮಾರಿಹಾಳ ಹಾಗೂ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳಲ್ಲಿ ಕಳವು ಮಾಡಿದ್ದಾಗಿ ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸುನೀಲಕುಮಾರ ನಂದೇಶ್ವರ, ಪಿಎಸ್‌ಐ ಆನಂದ ಅದಗೊಂಡ ಮತ್ತು ಸಿಎಚ್‌ಸಿ ಬಿ.ಎ. ಚೌಗಲಾ, ವೈ.ವೈ. ತಳೆವಾಡ, ಸಿ.ಎಂ. ಹುಣಶ್ಯಾಳ, ಎಂ.ಎಸ್. ಗಾಡವಿ, ಎಂ.ಎನ್. ಚಿಪ್ಪಲಕಟ್ಟಿ, ಬಿ.ವೈ. ಪೂಜಾರ, ಎಸ್.ಎಂ. ಲೋಕುರೆ ಕಾರ್ಯಾಚರಣೆ ನಡೆಸಿದ್ದರು. ಈ ತಂಡಕ್ಕೆ ನಗರ ಪೊಲೀಸ್ ಆಯುಕ್ತರು ನಗದು ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net