ಮೈಸೂರು: ಲ್ಯಾಪ್‌ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಹೆಬ್ಬಾಳು ಠಾಣೆ ಪೊಲೀಸರು, 2.22 ಲಕ್ಷ ರೂ. ಮೌಲ್ಯದ 7 ಲ್ಯಾಪ್‌ಟಾಪ್, 2 ಮೊಬೈಲ್, ಎರಡು ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆಐಎಡಿಬಿ ಬಡಾವಣೆಯಲ್ಲಿರುವ ಉದ್ಯೋಗಸ್ಥ ಪಿ.ಜಿ ಕೊಠಡಿಗಳು, ಮಾದೇಗೌಡ ವೃತ್ತದ 5ನೇ ಕ್ರಾಸ್‌ನ ಮನೆ ಮತ್ತು ಹೆಬ್ಬಾಳು ಒಂದನೇ ಹಂತದ ಮನೆಯೊಂದರಲ್ಲಿ ಮೇ 25ರಂದು ಆರೋಪಿ ಕಳ್ಳತನ ಮಾಡಿದ್ದನೆನ್ನಲಾಗಿದೆ.
ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಜೂನ್ 6ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಈತನೊಂದಿಗೆ ಮತ್ತೊಬ್ಬ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆತನ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯನಗರ ಉಪವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಹೆಬ್ಬಾಳು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಈ.ವಿ.ವಿನಯ್, ಎಸ್‌ಐ ಕೆ.ಎಸ್.ಭಾಸ್ಕರ್, ಎಎಸ್‌ಐ ಆರ್.ಟಿ.ಗಣೇಶ್, ಸಿಬ್ಬಂದಿ ರವಿಕುಮಾರ್, ವೀರಭದ್ರಯ್ಯ, ಹರೀಶ್, ವೆಂಕಟೇಶ್ ಎನ್.ಮಹೇಶ್ ಹೊಸಮನಿ, ಸುಭಾನಲ್ಲಾ ಬಾಲ್‌ದಾರ್, ಅವಿನಾಶ್‌ಕುಮಾರ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.