ಬಂಟ ಸಮುದಾಯಕ್ಕೆ ನಿಗಮ ಸ್ಥಾಪಿಸಲು ಆಗ್ರಹ

udp-7-bunts
Published on

ಉಡುಪಿ: ಕಳೆದ 2 ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಜಾಗತಿಕ ಬಂಟರ ಸಂಘದ ಮೂಲಕ ಬಂಟ ಸಮುದಾಯಕ್ಕೆ ಪ್ರತ್ಯೇಕ ನಿಗಮ ಘೋಷಿಸಬೇಕು ಮತ್ತು ಹಿಂದುಳಿದ ವರ್ಗದ 3 ಬಿಯಲ್ಲಿದ್ದ ಮೀಸಲಾತಿಯನ್ನು 2ಎವರ್ಗಕ್ಕೆ ಸೇರಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿದ್ದು, ಈವರೆಗೆ ಸ್ಪಂದನೆ ದೊರೆತಿಲ್ಲ. ಮಾ.25ರೊಳಗೆ ಸರ್ಕಾರ ಸೂಕ್ತ ನಿರ್ಧಾರ ಪ್ರಕಟಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಹಾಗೂ ಉಡುಪಿ ಬಂಟರ ಸಂಘದ ಗೌರವಾಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಲಿದೆ ಎಂಬ ಆಶಾಭಾವನೆ ಹೊಂದಿದ್ದೆವು. ಪ್ರಸ್ತುತ ಸರ್ಕಾರದ ಅವಧಿ ಮುಗಿಯುತ್ತ ಬಂದರೂ ಎರಡು ಬಹು ಮುಖ್ಯ ಬೇಡಿಕೆಗಳ ಬಗ್ಗೆ ಸರ್ಕಾರ ಗಂಭೀರ ಮೌನ ವಹಿಸಿರುವುದು ಬಂಟರ ಬಡ ವರ್ಗದಿಂದ ಹಿಡಿದು ಮಧ್ಯಮ ಹಾಗೂ ಶ್ರೀಮಂತ ವರ್ಗಕ್ಕೆ ಬೇಸರ ತಂದಿದೆ. ಗ್ರಾಮೀಣ ಪ್ರದೇಶದಿಂದ ಹಿಡಿದು ದೇಶ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಬಂಟರು ಈ ಬಗ್ಗೆ ಅಸಮಾಧಾನ ಹೊಂದಿದ್ದು, ಬಿಜೆಪಿ ಘನ ಸರ್ಕಾರಕ್ಕೆ ಬಂಟರ ಬೇಸರದ ಧ್ವನಿಯನ್ನು ತಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಬಂಟರು ಶ್ರೀಮಂತರು ಆಸ್ತಿವಂತರೂ ಅನ್ನುವ ತಪ್ಪು ಕಲ್ಪನೆ ಇದೆ. ಆವಿಭಜಿತ ಕರಾವಳಿ ಜಿಲ್ಲೆಯಲ್ಲಿ ಸೇರಿದಂತೆ ದೇಶ-ವಿದೇಶದಲ್ಲಿ ಸರಿಸುಮಾರು 30 ಲಕ್ಷಕ್ಕೂ ಮಿಕ್ಕಿ ಬಂಟರ ಜನಸಂಖ್ಯೆ ಇದೆ. ಇದರಲ್ಲಿ ಶೇ.90ರಷ್ಟು ಮಂದಿ ಬಂಟರು ಬಡ ಮತ್ತು ಮಧ್ಯಮ ವರ್ಗದಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಬಂಟರು ಕೃಷಿಯನ್ನೆ ಬಹು ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಭೂಸುಧಾರಣೆ ಕಾಯಿದೆ ಬಂದಾಗ ಸ್ವಂತ ಆಸ್ತಿಯನ್ನು ಕಳೆದುಕೊಂಡು ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಹೊಸ ವೃತ್ತಿಯನ್ನು ಮಾಡಿ ಸ್ವಪ್ರಯತ್ನದಿಂದಲೇ ಯಶಸ್ಸು ಕಂಡಿದ್ದಾರೆ. ಬೇರೆ ಜಾತಿಯವರಿಗೆ ಸರ್ಕಾರದ ಸವಲತ್ತುಗಳನ್ನು ನೀಡಿರುವ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ ಮಾತ್ರವಲ್ಲ ಸಂತೋಷಪಟ್ಟಿದ್ದೇವೆ. ಆದರೆ ನಮ್ಮ ಬೇಡಿಕೆಗಳಿಗೂ ಸರ್ಕಾರ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು.

ಬಂಟರಿಗೆ ಮೀಸಲಾತಿ ಇಲ್ಲದ ಕಾರಣದಿಂದ ಎಷ್ಟೋ ಪ್ರತಿಭಾವಂತ ಮಕ್ಕಳು ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಬಂಟರ ಆರ್ಥಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದ್ದರಿಂದ ಬಂಟರಿಗೊಂದು ನಿಗಮ ರಚನೆ ಮಾಡಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದೆ. ಯಾವ ರಾಜಕೀಯ ಪಕ್ಷಗಳು ಮುಂದಿನ ಪ್ರಾಣಾಳಿಕೆಯಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆ ಅವರಿಗೆ ಬೆಂಬಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಬಂಟರ ಸಂಘದ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡುನಿಡಂಬೂರು, ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸುರೇಂದ್ರನಾಥ ಶೆಟ್ಟಿ, ವಲಯ ಬಂಟರ ಸಂಘದ ಅಧ್ಯಕ್ಷರಾದ ತೋನ್ಸೆ ಮನೋಹರ್ ಶೆಟ್ಟಿ, ಕೊಡವೂರು ಬಂಟರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಉಡುಪಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಮಿತ್ ಕುಮಾರ್ ಶೆಟ್ಟಿ, ಕೃಷ್ಣ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net