

ಹುಬ್ಬಳ್ಳಿ: ಬಂಟ್ ಸಮುದಾಯದವರು ಶ್ರಮಜೀವಿಗಳು ಮತ್ತು ಸ್ವಾವಲಂಬಿಗಳು ಎಂದು ಶಾಸಕ ಮಹೇಶ ಟೆಂಗಿನಕಾಯಿ ಬಣ್ಣಿಸಿದರು.
ಹು-ಧಾ ಬಂಟರ ಸಂಘದಿಂದ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹಕೋಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಜಾಗೃತವಾಗಿದೆ. ತಮ್ಮ ಸಮಾಜದ ಮಕ್ಕಳು ಉನ್ನತ ಸ್ಥಾನ ಪಡೆಯಲು ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಸ್ಥಾನ ನೀಡಲು ಶ್ರಮಿಸುತ್ತಿದ್ದಾರೆ ಎಂದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಬಂಟ್ ಸಮುದಾಯದವರು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಬಿಜೆಪಿ ಮತ್ತು ಹಿಂದುತ್ವವನ್ನು ಈ ಸಮಾಜ ಕೈಬಿಡುವುದಿಲ್ಲ ಎಂಬುದು ಮನವರಿಕೆಯಾಗಿದೆ. ತಾವೇ ಅಭ್ಯರ್ಥಿ ಎಂದು ಭಾವಿಸಿ ಹಗಲಿರಳು ದುಡಿದರು. ಅಲ್ಲದೇ ಅವರು ಕೊಡುಗೈ ದಾನಿಗಳು ಎಂದು ಸ್ಮರಿಸಿದರು.
ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಮಾತನಾಡಿ, ನಾವೆಲ್ಲ ವಾರನ್ನದಂತೆ ಊಟ ಮಾಡಿ ಜ್ಞಾನಾರ್ಜನೆ ಪಡೆದವರು. ಈಗಿನ ಮಕ್ಕಳಿಗೆ ಹೀಗಾಗಬಾರದು. ನಮ್ಮ ಸಮಾಜ ಎಲ್ಲ ರೀತಿಯ ಸಹಕಾರ ನೀಡಬೇಕು. ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಮುಂದಾಗಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಗ್ರ ವಲಯ ಕ್ರೀಡಾಕೂಟ ಪ್ರಶಸ್ತಿಯನ್ನು ವಿದ್ಯಾನಗರ ಹಾಗೂ ಶರಾವತಿ ವಲಯ ಪಡೆದುಕೊಂಡಿತು. ಹಳೇ ಹುಬ್ಬಳ್ಳಿ ದ್ವಿತೀಯ ಹಾಗೂ ಗೋಕುಲ ರೋಡ್ ವಲಯ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟವು.
ಇದಕ್ಕೂ ಮೊದಲು ಕೀರ್ತಿ ಶೇಷ ಕೆ. ಶಂಕರ ಶೆಟ್ಟಿ ಸ್ಮರಣಾರ್ಥ ಅವರ ಪುತ್ರ ಪ್ರಸನ್ನ ಶೆಟ್ಟಿ ಅವರಿಂದ ಕೊಡಲ್ಪಡುವ ವಿದ್ಯಾರ್ಥಿ ವೇತನವನ್ನು ಪ್ರತಿಭಾವಂತ ಮಕ್ಕಳಿಗೆ ವಿತರಿಸಲಾಯಿತು.
ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಉಪಾಧ್ಯಕ್ಷರಾದ ಕೆ. ಸುರೇಶ ಶೆಟ್ಟಿ, ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರದೀಪ ಪಕ್ಕಳ, ಖಜಾಂಚಿ ಹರ್ಷಕುಮಾರ ಶೆಟ್ಟಿ, ಸಹ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಸುಚೇಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ದಿನೇಶ ಶೆಟ್ಟಿ ಇತರರು ಇದ್ದರು.