ಬೈರಾಪೂರ ಬೆಟ್ಟದಲ್ಲಿ ಬಂಟಿಂಗ್ ಕಲರವ

Bunting
Published on

ಗಜೇಂದ್ರಗಡ: ಚಳಿಗಾಲದ ಅತಿಥಿ, ಕಪ್ಪು ತಲೆಯ ಬಂಟಿಂಗ್ ಪಕ್ಷಿಗಳು ತಾಲೂಕಿನ ಬೈರಾಪೂರ ಬೆಟ್ಟಕ್ಕೆ ಬಹುಸಂಖ್ಯೆಯಲ್ಲಿ ವಲಸೆ ಬಂದಿದ್ದು, ಪಕ್ಷಿಪ್ರಿಯರಲ್ಲಿ ಸಂತಸ ಮೂಡಿಸಿದೆ.

ಕಪ್ಪು ತಲೆಯ ಬಂಟಿಂಗ್ ಎಂಬೆರಿಜಿಡೇ ಕುಟುಂಬಕ್ಕೆ ಸೇರಿದ ಈ ಹಕ್ಕಿಯ ವೈಜ್ಞಾನಿಕ ಹೆಸರು ಎಂಬೆರಿಜಾ ಮೆಲನೋಸೆಫಾಲಾ. ಈ ಬಂಟಿಂಗ್ ಹಕ್ಕಿಗಳು ಯುರೋಪ್ ಭಾಗಗಳಲ್ಲಿ ಕಂಡು ಬರುವ ಪುಟ್ಟ ವರ್ಣರಂಜಿತ ಪಕ್ಷಿಯಾಗಿದೆ. ಇದರ ಹೆಸರೇ ಸೂಚಿಸುವಂತೆ ಕಪ್ಪು ತಲೆ, ಕಣ್ಣುಗಳ ಮೇಲೆ ಮತ್ತು ಹೊಟ್ಟೆ ಭಾಗವು ಹಳದಿ ಬಣ್ಣದಿಂದ ಕೂಡಿದೆ. ಬೆನ್ನು ಸ್ವಲ್ಪ ಕಂದು ವರ್ಣದಿಂದ ಕೂಡಿದ್ದು, ನೋಡಲು ಆಕರ್ಷಕವಾಗಿದೆ. ತುಂಬಾ ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿದ್ದು, ಭಾರತಕ್ಕೆ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ವಲಸೆ ಬರುತ್ತವೆ. ಭಾರತ, ದಕ್ಷಿಣ ಏಷ್ಯಾದಲ್ಲಿ ಚಳಿಗಾಲದಲ್ಲಿ ವಲಸೆ ಬರುತ್ತವೆ. ಇವು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ತಮ್ಮ ಮೂಲಸ್ಥಾನದಿಂದ ವಲಸೆ ಆರಂಭಿಸಿ ದೊಡ್ಡ ಹಿಂಡುಗಳಲ್ಲಿ ಟರ್ಕಿ, ಇರಾನ್ ಮತ್ತು ಪಾಕಿಸ್ತಾನ ಮೂಲಕ ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ ಮತ್ತು ಕರ್ನಾಟಕ ಭಾಗಗಳಲ್ಲಿ ವಲಸೆ ಬರುತ್ತವೆ. ಕಪ್ಪು ತಲೆಯ ಬಂಟಿಂಗ್‌ಗಳು ಸುಮಧುರ ಕಂಠಹೊಂದಿವೆ. ಇವು ಪ್ರಮುಖವಾಗಿ ಕೀಟಗಳನ್ನು ಭಕ್ಷಿಸುವ ಮೂಲಕ ರೈತರಿಗೆ ಕೀಟ ನಿಯಂತ್ರಕಗಳಾಗಿ ಮತ್ತು ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬಂಟಿಂಗ್‌ಗಳು ಕುರುಚಲು ಹುಲ್ಲುಗಾವಲು, ಪೊದೆಗಳು ಮತ್ತು ಚದುರಿದ ಮರಗಳಂತಹ ಸ್ಥಳಗಳಲ್ಲಿ ಕಾಣಸಿಗುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ ಇದು ಪ್ರಮುಖವಾಗಿ ಮಿಡತೆ, ಜೀರುಂಡೆ ಮತ್ತು ಜೇಡಗಳನ್ನು ತಿನ್ನುತ್ತದೆ. ಹಣ್ಣು ಮತ್ತು ಬೀಜಗಳನ್ನು ವಿರಳವಾಗಿ ಸೇವಿಸುತ್ತದೆ. ಮಾರ್ಚ್ ಅಥವಾ ಏಪ್ರಿಲ್ ಮೊದಲ ವಾರದವರೆಗೂ ಭಾರತದಲ್ಲಿದ್ದು, ಉಷ್ಣತೆ ಹೆಚ್ಚಿದಂತೆ ಮೂಲ ಸ್ಥಾನಕ್ಕೆ ಮರಳುತ್ತವೆ.

ಕಪ್ಪು ತಲೆಯ ಬಂಟಿಂಗ್‌ಗಳು ಗಜೇಂದ್ರಗಡ ತಾಲೂಕಿನ ಬೈರಾಪೂರ ಬೆಟ್ಟಕ್ಕೆ ಆಗಮಿಸಿವೆ. ಬೆಟ್ಟ ಪ್ರದೇಶಕ್ಕೆ ಹಲವಾರು ಜಾತಿಯ ರ‌್ಯಾಪ್ಟರ್‌ಗಳು, ಬಂಟಿಂಗ್‌ಗಳು, ಸಿಪಿಲೆಗಳು ವಲಸೆ ಬರುತ್ತವೆ. ಪ್ರತಿ ವರ್ಷ ಚಳಿಗಾಲದಲ್ಲಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ. ಅಮೀನ್ ಅತ್ತರ, ವನ್ಯಜೀವಿ ಛಾಯಾಗ್ರಾಹಕ, ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net