

ಶಿರ್ವ: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಸಿಎಸ್‌ಐಆರ್ ಪ್ಯಾರಾಡೈಂ ಸಂಸ್ಥೆ, ಬೆಂಗಳೂರು ಅವರೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ದಕ್ಷಿಣ ಭಾರತ ಖಾಸಗಿ ತಾಂತ್ರಿಕ ಕಾಲೇಜಿನ ಜತೆ ಇದು ಮೊದಲ ಒಡಂಬಡಿಕೆಯಾಗಿದೆ.
ಈ ಎರಡೂ ಸಂಸ್ಥೆಗಳು ರಾಷ್ಟ್ರೀಯ ಕಾರ್ಯಗಾರ ಆಯೋಜಿಸುವುದು, ವಿಚಾರ ಸಂಕಿರಣ, ಸಂಶೋಧನ ಜ್ಞಾನದ ವಿನಿಮಯ, ವಿದ್ಯಾರ್ಥಿಗಳ ತಾಂತ್ರಿಕ ಕೌಶಲ ಅಭಿವೃದ್ಧಿಗೆ ಸಿಎಸ್‌ಐಆರ್ ಪ್ಯಾರಾಡೈಂ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ತರಬೇತಿ, ಎರಡೂ ಸಂಸ್ಥೆಗಳ ಅಧ್ಯಾಪಕರು ಜಂಟಿಯಾಗಿ ಬಿ.ಇ ಎಂ.ಟೆಕ್ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ಮತ್ತು ಸಂಶೋಧನಾ ಕಾರ್ಯಕ್ಕೆ ಮಾರ್ಗದರ್ಶನ ನೀಡುವುದು ಒಡಂಬಡಿಕೆ ಮುಖ್ಯ ಉದ್ದೇಶ. ಜತೆಗೆ ಬಂಟಕಲ್ಲಿನ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಭೂಮಿ ಪದರಗಳ ಚಲನಶೀಲತೆ ಅಧ್ಯಯನ ನಡೆಸುವ ಉದ್ದೇಶದಿಂದ ಒಂದು ಕೇಂದ್ರ ಸ್ಥಾಪಿಸಲಾಗಿದ್ದು ಅದರಿಂದ ದೊರೆಯುವ ಮಾಹಿತಿ ಕ್ರೋಢೀಕರಿಸಿ ವಿಶೇಷ ಅಧ್ಯಯನ ನಡೆಸುವ ಯೋಜನೆ ಹೊಂದಲಾಗಿದೆ.
ಒಡಂಬಡಿಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಸಿಎಸ್‌ಐಆರ್ ಪ್ಯಾರಾಡೈಂ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಡಾ.ಇಮ್ತಿಯಾಜ್ ಎ.ಪರ್ವೇಜ್, ಚಿರಂಜೀವಿ ವಿವೇಕ್ ಜಿ., ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಸೋದೆ ಮಠದ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಸಂಸ್ಥೆ ಡೀನ್‌ಗಳಾದ ಡಾ.ಸುದರ್ಶನ್ ರಾವ್ ಕೆ., ಡಾ.ನಾಗರಾಜ್ ಭಟ್, ಎಂಬಿಎ ವಿಭಾಗ ನಿರ್ದೇಶಕ ಡಾ.ಸೂರಜ್ ಫ್ರಾನ್ಸಿಸ್ ನೋರೊನ್ಹಾ, ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ಒಡಂಬಡಿಕೆ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಉತ್ತೇಜಿಸುವುದು ಹಾಗೂ ಒಡಂಬಡಿಕೆ ಮೂಲಕ ದೊರೆಯುವ ಎಲ್ಲ ಲಾಭಗಳನ್ನು ವಿದ್ಯಾಸಂಸ್ಥೆ ಪಡೆಯುವ ನಿಟ್ಟಿನಲ್ಲಿ ಒಡಂಬಡಿಕೆ ಸಂಪರ್ಕಾಧಿಕಾರಿಯಾಗಿ ಡಾ.ಸುರಜಿತ್ ಡೆಬರ್ಮಾ ಅವರನ್ನು ನಿಯೋಜಿಸಲಾಗಿದೆ.