

ದೇವನಹಳ್ಳಿ: ಸರ್ಕಾರ ರೈತ ವಿರೋಧಿ ಮಸೂದೆ ಮಂಡಿಸಿರುವುದನ್ನು ಖಂಡಿಸಿ ರೈತರು ದೇವನಹಳ್ಳಿಯಲ್ಲಿ ಶುಕ್ರವಾರ ಹೆದ್ದಾರಿ ತಡೆ ನಡೆಸಿದರು.
ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೆಂಪೇಗೌಡ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಜಿ.ಜಿ. ಹಳ್ಳಿ ನಾರಾಯಣಸ್ವಾಮಿ, ರೈತ ವಿರೋಧಿ ಮಸೂದೆಗಳನ್ನು ಸರ್ಕಾರಗಳು ಹಿಂಪಡೆಯಬೇಕು. ಇಲ್ಲವಾದಲ್ಲಿ 28ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮಗೆ ಅನ್ಯಾಯವಾದಾಗ ಜನತಾ ನ್ಯಾಯಾಲಯದ ಮುಂದೆ ಬಂದಿದ್ದರು. ಅದರಂತೆ ರೈತ ವಿರೋಧಿ ನೀತಿ ಜಾರಿಗೆ ತರುವಾಗ ಜನತಾ ನ್ಯಾಯಾಲಯದ ಮುಂದೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಕರವೇ ಕನ್ನಡಿಗರ ಸಾರಥ್ಯದಲ್ಲಿ ಸಂಘಟನೆ ಅಧ್ಯಕ್ಷ ಅಗಲಗುರ್ಕಿ ಚಲಪತಿ ಮಾತನಾಡಿ, ಸರ್ಕಾರ ಎಪಿಎಂಸಿ ಮಸೂದೆಗೆ ತಿದ್ದುಪಡಿ ತಂದಿದೆ. ಇದರಿಂದಾಗಿ, ಬೆಳೆಯನ್ನು ರೈತ, ಅವರು ಕೇಳಿದ ಬೆಲೆಗೆ ಕೊಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಆರ್.ಉಮೇಶ್‌ಕುಮಾರ್, ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಜಿಲ್ಲಾಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕರವೇ ಕನ್ನಡಿಗರ ಸಾರಥ್ಯದಲ್ಲಿ ಜಿಲ್ಲಾಧ್ಯಕ್ಷ ಮುನಿರಾಜು ಅಪ್ಪಯ್ಯ, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಶಂಕರ್, ಉಪಾಧ್ಯಕ್ಷ ಗಯಾಜ್ ಪಾಷಾ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಮಾನವಹಕ್ಕುಗಳ ಜಾಗೃತಿ ಸಮಿತಿಯ ತಾಲೂಕು ಅಧ್ಯಕ್ಷ ಎ.ಎಂ. ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಂತಿಯುತವಾಗಿ ಕೆಲಕಾಲ ಹೆದ್ದಾರಿ ತಡೆ ನಡೆಸಿದರು. ಪೊಲೀಸರು ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದಾಗ ಪ್ರತಿಭಟನಾಕಾರರು ಪ್ರತಿರೋಧ ತೋರಿದರು. ಇದರಿಂದಾಗಿ ಕೆಲಕಾಲ ಮಾತಿನ ಚಕಮಕಿ ನಡೆಯಿತು.