

ಬೆಂಗಳೂರು: ೧೦ ವರ್ಷಗಳಿಂದ ತಾವು ಊಟ ಹಾಕುತ್ತಿದ್ದ ಬೀದಿ ನಾಯಿಗಳನ್ನು ದಿಲೀಪ್ ಎಂಬಾತ ಅವುಗಳನ್ನು ಕದ್ದು, ಹಿಂಸಿಸಿ ಬೇರೆಡೆ ಬಿಟ್ಟು ಬಂದಿರುವುದಾಗಿ ಆರೋಪಿಸಿ ಸಂಭವ ಪ್ರಕಾಶ್ ಎಂಬುವವರು ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯಶವಂತಪುರ ನಿವಾಸಿಯಾದ ಪ್ರಕಾಶ್, ಕುಮಾರಪಾರ್ಕ್ ಪಶ್ಚಿಮ ಬಡಾವಣೆಯ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದಾರೆ. ಆ ಕಂಪನಿ ಮಾಲೀಕರಾದ ವೆಪಲವಿ ಮಹೇಂದ್ರ ಅವರು ಕಚೇರಿಯ ಮೇಲ್ಭಾಗದ ಮನೆಯಲ್ಲಿ ವಾಸವಾಗಿದ್ದು, ಹಲವು ವರ್ಷಗಳಿಂದ ಮೂರು ಬೀದಿ ನಾಯಿಗಳನ್ನು ಸಾಕಿದ್ದರು. ವೆಪಲವಿ ಮಹೇಂದ್ರ ಅವರು ಲಂಡನ್‌ಗೆ ಹೋಗಿ ನೆಲೆಸಿದ್ದು, ಅವರ ಅನುಪಸ್ಥಿತಿಯಲ್ಲಿ ಪ್ರಕಾಶ್ ಆ ಬೀದಿ ನಾಯಿಗಳನ್ನು ಪೋಷಿಸುತ್ತಿದ್ದರು. ನಾಯಿಗಳಿಗೆ ಪ್ರತಿನಿತ್ಯ ಮೂರು ಹೊತ್ತು ಆಹಾರ ಕೊಟ್ಟು ಆರೈಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಅ.೪ರಿಂದ ೨೦ರ ಅವಧಿಯಲ್ಲಿ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ಕಾಣೆಯಾಗಿವೆ. ವೆಪಲವಿ ಮಹೇಂದ್ರ ಅವರ ಪಕ್ಕದ ಮನೆಯಲ್ಲಿ ಕೆಲಸ ಮಾಡುವ ದಿಲೀಪ್ ಎಂಬಾತ ಬೀದಿ ನಾಯಿಗಳ ವಿಚಾರವಾಗಿ ಆಗಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಆತನೇ ನಾಯಿಗಳನ್ನು ರಾತ್ರೋರಾತ್ರಿ ಎಳೆದೊಯ್ದು ಅವುಗಳಿಗೆ ಹಿಂಸೆ ಕೊಟ್ಟು ಬೇರೆಡೆ ಬಿಟ್ಟು ಬಂದಿರಬಹುದು. ಈ ವಿಚಾರ ಗೊತ್ತಾಗಿ ದಿಲೀಪ್‌ನನ್ನು ಪ್ರಶ್ನೆ ಮಾಡಿದರೂ ನಾಯಿಗಳನ್ನು ಬಿಟ್ಟು ಬಂದಿರುವ ಜಾಗದ ಬಗ್ಗೆ ಮಾಹಿತಿ ಕೊಡುತ್ತಿಲ್ಲ ಎಂದು ಪ್ರಕಾಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡಿದರೂ ನಾಯಿಗಳು ಪತ್ತೆಯಾಗಿಲ್ಲ. ಮೂರು ನಾಯಿಗಳ ಪೈಕಿ ಒಂದಕ್ಕೆ ತುಂಬಾ ವಯಸ್ಸಾಗಿದ್ದು, ಚರ್ಮ ರೋಗದಿಂದ ಬಳಲುತ್ತಿದೆ. ನಾಯಿಗಳಿಗೆ ಹಿಂಸೆ ಕೊಟ್ಟು ಬೇರೆಡೆಗೆ ಬಿಟ್ಟು ಬಂದಿರುವ ದಿಲೀಪ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪ್ರಕಾಶ್ ಮನವಿ ಮಾಡಿದ್ದಾರೆ. ದೂರು ಆಧರಿಸಿ ದಿಲೀಪ್ ಮೇಲೆ ಪ್ರಾಣಿಗಳ ವಿರುದ್ಧದ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೩೫ ಸಾವಿರ ಬಹುಮಾನ ೋಷಣೆ:
ಸಂಭವ ಪ್ರಕಾಶ್ ಸಾಕಿ ಬೆಳೆಸಿದ್ದ ಬೀದಿ ನಾಯಿಗಳು ನಾಪತ್ತೆಯಾಗಿದ್ದು, ಮೆಚ್ಚಿನ ಶ್ವಾನಗಳನ್ನು ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ. ಮೂರು ಶ್ವಾನಗಳನ್ನು ಹುಡುಕಿ ಕೊಟ್ಟವರಿಗೆ ೩೫ ಸಾವಿರ ರೂ.ಬಹುಮಾನ ನೀಡುವುದಾಗಿ ೋಷಣೆ ಮಾಡಿದ್ದಾರೆ.