

ತುಮಕೂರು: ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಬುಧವಾರ ಚಮತ್ಕಾರವೇ ನಡೆದಿದ್ದು, ಕೊಬ್ಬರಿ ಕ್ವಿಂಟಾಲ್ಗೆ ಬರೋಬ್ಬರಿ 15,022 ರೂಪಾಯಿಗೆ ಹರಾಜಾಗುವ ಮೂಲಕ ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ, ಹರಾಜಾದ ಬೆಲೆ ನೀಡಲು ದಲ್ಲಾಳಿಗಳು ಹಿಂದೇಟು ಹಾಕಿರುವುದು ಕೈಗೆ ಬಂದ ತುತ್ತು, ಬಾಯಿಗೆ ಇಲ್ಲದಂತಾಗಿದೆ.
ಹೌದು, ಪಾತಾಳಕ್ಕೆ ಕುಸಿದಿದ್ದ ಕೊಬ್ಬರಿ ಬೆಲೆ ಒಂದೇ ವಾರದಲ್ಲಿ ಅನಿರೀತವಾಗಿ 15 ಸಾವಿರ ರೂಪಾಯಿ ತಲುಪಿದ ಖುಷಿ ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಯಲೇ ಇಲ್ಲ, ತಿಪಟೂರು ಮಾರುಕಟ್ಟೆಯಲ್ಲಿ ಎಲ್ಲ ರವಾನೆದಾರರು ಅನುಸರಿಸುತ್ತಿದ್ದ ಜಿಆರ್ ಅಂಗಡಿಯಲ್ಲಿ ಮಾತ್ರ 92 ಕ್ವಿಂಟಾಲ್ಗೆ 15,200 ರೂ. ಹರಾಜು ನಡೆದಿದ್ದು, ಉಳಿದ ಅಂಗಡಿಗಳು ಅಷ್ಟು ಬೆಲೆಗೆ ಕೊಂಡುಕೊಳ್ಳಲು ಹಿಂದೇಟು ಹಾಕಿದ್ದು ವಿವಾದ ಹುಟ್ಟುಹಾಕಿದೆ.
ಬುಧವಾರದ ಹರಾಜಿನಲ್ಲಿ ತಿಪಟೂರು ಮಂಡಿಯಲ್ಲಿ 4,203 ಚೀಲ ಆವಕ ವ್ಯಾಪಾರಕ್ಕೆ ಬಂದಿದ್ದು, ಈ ಪೈಕಿ 2,482 ಚೀಲ 14 ಸಾವಿರಕ್ಕೂ ಹೆಚ್ಚು ಬೆಲೆಗೆ ಹರಾಜಾಗಿದೆ. 1621 ಚೀಲ 14 ಸಾವಿರ ರೂ. ಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗಿದೆ. ಆದರೆ, ಜಿಆರ್ ಅಂಗಡಿಯಲ್ಲಿ ನಡೆದ ಹರಾಜಿನಲ್ಲಿ ಭಾಗವಹಿಸಿದ್ದ ಕರಿಸಿದ್ದೇಶ್ವರ ಟ್ರೇಡರ್ಸ್ 92 ಚೀಲಗಳನ್ನು ಕ್ವಿಂಡಾಲ್ಗೆ 15,200 ರೂ. ನೀಡಿ ಕೊಂಡುಕೊಂಡಿದೆ.
ತಿಪಟೂರು ಮಂಡಿ ಇತಿಹಾಸದಲ್ಲಿ ಈವರೆಗೂ ಬಹುತೇಕ ಎಲ್ಲ ದಲ್ಲಾಳಿಗಳು ಜಿಆರ್ ಅಂಗಡಿಯ ಹರಾಜು ದರವನ್ನೇ ರೈತರಿಗೆ ನೀಡಿ ಪಟ್ಟಿ ಮಾಡುತ್ತಿರುವುದು ವಾಡಿಕೆಯಾಗಿತ್ತು. ಬುಧವಾರ ಆಯಾ ಅಂಗಡಿಯಲ್ಲಿ ನಡೆದ ಹರಾಜಿನಂತೆ ದರ ನೀಡಲು ಆರಂಭಿಸಿದ್ದು, ಮಾರುಕಟ್ಟೆಯಲ್ಲಿ ರೈತರನ್ನು ಕೆರಳಿಸಿತು. ಎಪಿಎಂಸಿ ಅಧಿಕಾರಿಗಳಿಗೆ ರೈತರು ದೂರು ನೀಡಿದ ಹಿನ್ನೆಲೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ಖುದ್ದು ಮೈಕ್ನಲ್ಲಿ ಜಿಆರ್ ಅಂಗಡಿಯಲ್ಲಿನ ದರವನ್ನು ಎಲ್ಲರೂ ಪಾಲಿಸಬೇಕು ಎಂದು ಸೂಚನೆ ನೀಡಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.
ಆಯಾ ಅಂಗಡಿಗಳಲ್ಲಿ ಟೆಂಡರ್ ಆದ ದರಕ್ಕೆ ಕೊಬ್ಬರಿ ತೂಗುತ್ತೇವೆ ಎಂದು ಕೆಲವು ಅಂಗಡಿಗಳ ಮಾಲೀಕರು ಪಟ್ಟು ಹಿಡಿದಿದ್ದು, ಎಪಿಎಂಸಿ ಹಾಗೂ ರವಾನೆದಾರರ ನಡುವೆ ಸಂರ್ಷಕ್ಕೆ ಕಾರಣವಾಗಿದೆ. ಮಾರುಕಟ್ಟೆಯ ಒಂದು ಅಂಗಡಿಯನ್ನು ನಾವೇಕೆ ಅನುಕರಣೆ ಮಾಡಬೇಕು, ಇದಕ್ಕೆ ಎಪಿಎಂಸಿ ಏಕೆ ಉತ್ತೇಜನ ನೀಡಬೇಕು ಎಂಬ ವಾದವನ್ನು ರವಾನೆದಾರರು ಮುಂದಿಟ್ಟಿದ್ದಾರೆ. ಸಂಪ್ರದಾಯದಂತೆ ಜಿಆರ್ ಅಂಗಡಿಯ ಟೆಂಡರ್ ದರದಲ್ಲಿಯೇ ಎಲ್ಲರೂ ಕೊಬ್ಬರಿಯನ್ನು ರೈತರಿಂದ ಕೊಂಡುಕೊಳ್ಳಬೇಕು
ಎಂಬುದು ಎಪಿಎಂಸಿ ಅಧಿಕಾರಿಗಳ ವಾದವಾಗಿದ್ದು, ಎರಡೂ ಗುಂಪಿನ ನಡುವೆ ಬುಧವಾರ ಗಲಾಟೆ ಕೂಡ ನಡೆದಿದೆ.
ದರ ಹೆಚ್ಚಳದ ಹಿಂದೆ ವ್ಯಾಪರಸ್ಥರ ಹುನ್ನಾರ?: ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಕೊಬ್ಬರಿ ದರ ಅನಿರೀತ ಏರಿಕೆ ಕಾಣುತ್ತಿರುವ ಬಗ್ಗೆ ಚರ್ಚೆ ಆರಂಭವಾಗಿದೆ. ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಕೊಂಡುಕೊಂಡಿದ್ದ ಕೊಬ್ಬರಿ ಹರಾಜು ನಡೆದ ನಂತರವೇ ಇಷ್ಟೊಂದು ದರ ನಿಗದಿಯಾಗಲು ಹೇಗೆ ಸಾಧ್ಯ ಎಂಬ ಕುತೂಹಲ ಮೂಡಿಸಿದೆ. ಸರ್ಕಾರದ ಗೋದಾಮಿನಿಂದ ಹರಾಜಿನಲ್ಲಿ ಕ್ವಿಂಟಾಲ್ಗೆ 9 ಸಾವಿರ ರೂಪಾಯಿ ಆಸುಪಾಸಿನಲ್ಲಿ ಕೊಂಡುಕೊಂಡಿರುವ ಲಾಂತರ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಲುವಾಗಿಯೇ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಟೆಂಡರ್ನಲ್ಲಿ ಭಾಗವಹಿಸಿ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸಿರಬಹುದು ಎಂಬ ತಿಪಟೂರು ಮಂಡಿ ವಲಯದಲ್ಲಿ ಗುಸುಗುಸು ಕೇಳಿಬಂದಿದೆ.
ಬುಧವಾರ ಕೊಬ್ಬರಿ ದರ 15,022 ರೂಪಾಯಿಗೆ ಎಲ್ಲ ದಲ್ಲಾಳಿಗಳು ತಕ್ಷಣ ಅಂಗಡಿಗೆ ಬಂದ ರೈತರಿಗೆ ಅದೇ ದರದಲ್ಲಿ ಕೊಬ್ಬರಿ ಕೊಂಡುಕೊಂಡು ಬಿಲ್ ಪಾವತಿ ಮಾಡಿ ಕಳುಹಿಸಬೇಕು. ಯಾವ ಅಂಗಡಿಯಲ್ಲಿ ಈ ದರವನ್ನು ನೀಡುವುದಿಲ್ಲ, ಅಂತಹವರ ಮೇಲೆ ದೂರುಗಳು ಬಂದರೆ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ನ್ಯಾಮಗೌಡ ಕಾರ್ಯದರ್ಶಿ, ತಿಪಟೂರು ಎಪಿಎಂಸಿ
ಎಲ್ಲ ಮಾರುಕಟ್ಟೆ ದಲ್ಲಾಳಿಗಳು 15022 ರೂ. ಗಳಿಗೆ ಪಟ್ಟಿ ಮಾಡಬೇಕು ಎಂದು ತಿಪಟೂರು ಎಪಿಎಂಸಿ ಕಾರ್ಯದರ್ಶಿ ಬುಧವಾರ ಎಪಿಎಂಸಿ ಪ್ರಾಂಗಣದಲ್ಲಿ ಬಹಿರಂಗ ಘೋಷಣೆ ಮಾಡಿದ್ದಾರೆ. ಈ ಸೂಚನೆ ರೈತರ ಹಿತದೃಷ್ಟಿಯಿಂದ ಸ್ವಾಗತಾರ್ಹ ಎನ್ನಿಸಿದರೂ ಮಾರುಕಟ್ಟೆಯಲ್ಲಿ ಹೊಸ ಗೊಂದಲ ಸೃಷ್ಟಿಸಿದೆ. ಹಾಗಾಗಿ, ಈ ಬಗ್ಗೆ ಇರುವ ಗೊಂದಲ ನಿವಾರಿಸಿ ರೈತರಿಗೆ ಅನುಕೂಲವಾಗುವ ನಿರ್ಧಾರ ತೆಗೆದುಕೊಳ್ಳಬೇಕು.
ಶ್ರೀಕಾಂತ್ ಕೆಳಹಟ್ಟಿ ಬೆಲೆ ಕಾವಲು ಸಮಿತಿ