ಮುಂದಿನ ಪೀಳಿಗೆಗೆ ಕುಂಬಾರಿಕೆ ಕಲೆ ಉಳಿಸಿ

23 dec tnp 00
Published on

 ತಿ.ನರಸೀಪುರ: ಕುಂಬಾರಿಕೆ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಶ್ರೀ ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಅಧ್ಯಕ್ಷ ಕಿರಗಸೂರು ರಮೇಶ ಹೇಳಿದರು. ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಂಘದಿಂದ ಪ್ರಕಟಿಸಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನಾದ್ಯಂತ ಕುಂಬಾರ ಸಂಘದ ಸದಸ್ಯತ್ವ ನೋಂದಣಿ ಕಾರ್ಯವನ್ನು ಆರಂಭಿಸಿ, ಸಮುದಾಯದ ಸಂಘಟನೆ ಚುರುಕುಗೊಳಿಸಲಾಗುವುದು. ಸಮುದಾಯದವರ ಹಿತ ಕಾಪಾಡಲು, ವರ್ತಮಾನದ ಆಗು-ಹೋಗು, ಸಮಸ್ಯೆ, ಸವಾಲುಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯಲಾಗುವುದು ಎಂಧರು. ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲ ಸದಸ್ಯರೂ ಸಹಕಾರ ನೀಡಬೇಕು ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಕೇತಹಳ್ಳಿ ರಾಜಣ್ಣ ಮಾತನಾಡಿ, ಕುಂಬಾರಿಕೆ ಕೌಶಲ ಯುವಜನರಲ್ಲಿ ವೃದ್ಧಿಸುವ ದಿಸೆಯಲ್ಲಿ ಯೋಜನೆ ರೂಪಿಸಲು ಸಂಘ ಸಂಕಲ್ಪಮಾಡಿದೆ ಎಂದರು. ಸಮುದಾಯದವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸದೃಢರಾಗಬೇಕು. ಸರ್ಕಾರದ ಸವಲತ್ತುಗಳನ್ನು ಅರ್ಹರು ಪಡೆಯಬೇಕು. ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು. ಸಂಘದ ಗೌರವಾಧ್ಯಕ್ಷ ಮಹದೇವಶೆಟ್ಟಿ, ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಚಂದ್ರು, ಪದಾಧಿಕಾರಿಗಳಾದ ಜಿ.ರವಿಕುಮಾರ, ಎಂ.ಪಿ.ಸಿದ್ದರಾಜು, ನಾಗರಾಜು, ಮಹದೇವಶೆಟ್ಟಿ, ಬಿ.ಎನ್. ಮಂಜುನಾಥ, ಶಿವಕುಮಾರ, ವಸಂತಾ, ಮಹದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net