ಶಾಲೆಯಲ್ಲಿ ಮಕ್ಕಳ ಹಿಂಸಿಸುವುದು ಸರಿಯಲ್ಲ

KANUNU ARIVU
Published on

ಬ್ಯಾಡಗಿ: ಸಂವಿಧಾನ ಎಲ್ಲರಿಗೂ ಜೀವಿಸಲು ಹಕ್ಕು ಕೊಟ್ಟಿದೆ. ನಾವು ಧೈರ್ಯದಿಂದ ಸಾಮಾಜಿಕವಾಗಿ ಬದುಕಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಕಾನೂನು ತಿಳಿದುಕೊಳ್ಳುವುದು ಅಗತ್ಯ ಎಂದು ಸಿವಿಲ್ ನ್ಯಾಯಾಧೀಶ ಎಸ್.ಟಿ. ಸತೀಶ ಹೇಳಿದರು.

ಪಟ್ಟಣದ ಆದರ್ಶ ಸೆಂಟ್ರಲ್ ಸ್ಕೂಲ್​ನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ತಾಲೂಕು ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ, ಶಿಶು ಯೋಜನಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾನೂನು ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರು ಹಾಗೂ ಶಿಕ್ಷಕರು ಯಾವುದೇ ಕಾರಣಕ್ಕೂ ಮಕ್ಕಳ ಕುರಿತು ನಿರ್ಲಕ್ಷ್ಯತೋರಬಾರದು. ಕೆಲವೊಮ್ಮೆ ನಿರ್ಲಕ್ಷ್ಯಗಳು ದೊಡ್ಡ ಸಮಸ್ಯೆಗೆ ಕಾರಣವಾಗಲಿವೆ. ಮಕ್ಕಳಿಗೆ ಶಾಲೆಯಲ್ಲಿ ಹಿಂಸೆ ನೀಡುವುದು, ಮಾನಸಿಕ, ದೈಹಿಕ ತೊಂದರೆ ನೀಡುವುದು ಸರಿಯಲ್ಲ. ಇಂತಹ ಘಟನೆಗಳ ಕುರಿತು ಸಾರ್ವಜನಿಕರು, ಪಾಲಕರು ಸಂಬಂಧಿಸಿದ ಇಲಾಖೆಗೆ ದೂರು ಸಲ್ಲಿಸಿದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಶಿಶು ಯೋಜನಾಧಿಕಾರಿ, ಸ್ಥಳೀಯ ಸಂಸ್ಥೆಗಳ ಆಶ್ರಯ ದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸಮಿತಿ ರಚಿಸಲಾಗಿದೆ. ಹಲವು ಬಾರಿ ಮಕ್ಕಳು ದೂರು ನೀಡಲು ಹಿಂದೇಟು ಹಾಕುತ್ತಿದ್ದು, ಸಹಾಯವಾಣಿಯಿಂದ ಕರೆ ಮಾಡಬಹುದು ಎಂದರು.

ಮಾನವ ಕಳ್ಳ ಸಾಗಾಣಿಕೆ ಘಟನೆಗಳು ಆಗಾಗ ನಡೆ ಯುವ ಸಂಭವವಿದ್ದು, ಇದಕ್ಕಾಗಿ ಸ್ಥಳೀಯ ಸಂಘ- ಸಂಸ್ಥೆಗಳು, ಸಾಂತ್ವನ ಕೇಂದ್ರಗಳು, ಸರ್ಕಾರದ ವಿವಿಧ ಹಂತದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ಆದರ್ಶ ಸಂಸ್ಥೆಯ ಉಪಾಧ್ಯಕ್ಷ ಜಯದೇವ ಶಿರೂರು ಮಾತನಾಡಿ, ಮಕ್ಕಳ ತೊಂದರೆ ತಪ್ಪಿಸಲು ಮಾಸಿಕವಾಗಿ ಪಾಲಕರ ಸಭೆ ಕರೆದು, ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಸಲಾಗಿದೆ. ಶಾಲಾ ಆಡಳಿತ ಮಂಡಳಿಯವರು ಆಗಾಗ ಭೇಟಿ ನೀಡುವ ಮೂಲಕ ವ್ಯವಸ್ಥೆಯನ್ನು ಶಿಸ್ತಿನಿಂದ ನಿರ್ವಹಿಸಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಅಗತ್ಯವಾದ ತಾಂತ್ರಿಕ ಶಿಕ್ಷಣ, ಶಿಸ್ತು ಕಲಿಸಲು ಒತ್ತು ನೀಡಿದ್ದೇವೆ ಎಂದರು.

ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ಎಸ್.ಎನ್. ರ್ಬಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಸದಸ್ಯರಾದ ಎಂ.ಪಿ. ಹಂಜಿಗಿ, ಭಾರತಿ ಕುಲಕರ್ಣಿ, ಎಂ.ಜೆ. ಪಾಟೀಲ, ಬಿ.ಟಿ. ಪಿಸೆ, ಲಕ್ಷ್ಮಿ ಗುಗ್ಗರಿ, ಎಸ್.ಎಸ್. ಕೊಣ್ಣೂರ, ಆದರ್ಶ ಸಂಸ್ಥೆಯ ಉಪಾಧ್ಯಕ್ಷ ಜಯದೇವ ಶಿರೂರು, ಕಾರ್ಯದರ್ಶಿ ವೀರೇಶ ಶಿರೂರು, ಕೆ.ಎನ್. ನಿಂಗಹಳ್ಳಿ, ಮೇಲ್ವಿಚಾರಕಿ ಸುಮಂಗಲಾ ಬಕ್ಕನವರ, ಮುಖ್ಯಶಿಕ್ಷಕ ಅವಿನಾಶ ಮೋಹಿತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net