

ಲಿಂಗಸುಗೂರು: ಕಾರ ಹುಣ್ಣಿಮೆಯನ್ನು ತಾಲೂಕಿನಲ್ಲಿ ರೈತರು ಶುಕ್ರವಾರ ಮತ್ತು ಶನಿವಾರ ಸಂಭ್ರಮದಿಂದ ಆಚರಿಸಿದರು.
ಕಾರ ಹುಣ್ಣಿಮೆ ರೈತರಿಗೆ ಪ್ರಮುಖ ಆಚರಣೆಯಾಗಿದೆ. ಮುಂಗಾರಿನ ಮೊದಲ ಹುಣ್ಣಿಮೆ ಮಳೆಗಾಲ ಆರಂಭದ ಸಂಕೇತವಾಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಆರಂಭದ ಗಳಿಗೆಯಾಗಿದೆ. ಕಾರ ಹುಣ್ಣಿಮೆ ದಿನದಂದು ರೈತರು ಎತ್ತುಗಳಿಗೆ ಪೂಜೆ, ನೈವೇದ್ಯ ಸಲ್ಲಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ.
ರೈತರು ಬೆಳಗ್ಗೆ ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಬಣ್ಣ ಬಳಿದು, ಗೆಜ್ಜೆ, ಬಳೆ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಹೋಳಿಗೆ, ಕಡಬು, ಅನ್ನ, ಸಾರು ಇತ್ಯಾದಿ ಭಕ್ಷೃ ತಯಾರಿಸಿ ನೈವೇದ್ಯ ತಿನ್ನಿಸಿದರು. ಸಂಜೆ ಎತ್ತುಗಳ ಓಟದ ಸ್ಪರ್ಧೆ ನಡೆಸಿ ಕರಿ ಹರಿದರು.
ಕೆಲವೆಡೆ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ, ಯುವಕರಿಂದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಭಾರದ ಚೀಲ ಎತ್ತು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ಹಾಗೂ ಎರಡನೇ ಸ್ಥಾನ ಪಡೆದ ಜಾನುವಾರು ಹಾಗೂ ಯುವಕರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.