

ಬಾಗಲಕೋಟೆ: ಮೊದಲ ಹಂತದಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದೆ. ಶುಕ್ರವಾರ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಎಲ್ಲೆಡೆ ನಾಮಪತ್ರ ಸಲ್ಲಿಕೆ ಭರಾಟೆ ನಡೆಯಿತು. ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಆಗಮಿಸಿದ್ದು ಗಮನ ಸೆಳೆಯಿತು.
ಎತ್ತಿನ ಬಂಡಿಗೆ ಹಸಿರು ತೋರಣ, ಕಬ್ಬು ಕಟ್ಟಿ ಅಲಂಕಾರ ಮಾಡಿದ್ದ 25 ಬಂಡಿಗಳ ಮೆರವಣಿಗೆ ನಡೆಯಿತು. ನೂರಾರು ಜನರು ಘೋಷಣೆ ಕೂಗುತ್ತ ಪಾದಯಾತ್ರೆ ನಡೆಸಿದರೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಹೊರಟಿದ್ದ ಅಭ್ಯರ್ಥಿಗಳು ಜನರ ಕಡೆಗೆ ಕೈಬೀಸಿ ನಾಮಪತ್ರ ಸಲ್ಲಿಕೆ ವೇಳೆಯೇ ಶಕ್ತಿ ಪ್ರದರ್ಶನ ನಡೆಸಿದರು.
ಮದಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗಾನಟ್ಟಿ ಗ್ರಾಮದ ವಾರ್ಡ್ ನಂಬರ್ 1 ಮತ್ತು 2ರಲ್ಲಿ ಅಖಾಡಕ್ಕೆ ಇಳಿದಿರುವ ರಾಘು ಸೈದಾಪುರ, ಸತ್ಯರಾಜು ಸೈದಾಪುರ, ಪಾರ್ವತಿ ಹಿಟ್ನಾಳ, ದುಂಡಪ್ಪ ಮೇಟಿ, ಮಾನವ್ವ ಗಾಡಿಕಾರ ಎನ್ನುವವರು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಬಂದು ಬಳಿಕ ನಾಮಪತ್ರ ಸಲ್ಲಿಸಿದರು.