

ಮಂಡ್ಯ : ಕರ್ನಾಟಕ ಬಂದ್ ಮಳವಳ್ಳಿ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರಗಳಲ್ಲೂ ಬಹುತೇಕ ಯಶಸ್ವಿಯಾಯಿತು.
ಪಟ್ಟಣದಲ್ಲಿ ರೈತ ಸಂಘ ಮೂಲ ಬಣ, ಕನ್ನಡಪರ ಸಂಘಟನೆಗಳು ಹಾಗೂ ಮಾರ್ವಾಡಿ ಸಂಘದ ಪದಾಧಿಕಾರಿಗಳು ಮತ್ತು ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಬೀದಿಗಿಳಿದ ಹೋರಾಟ ನಡೆಸಿದರು. ಅಂಗಡಿ ಮುಂಗಟ್ಟು, ಚಿತ್ರಮಂದಿರ ಮುಚ್ಚಿತ್ತು.
ಜಿಲ್ಲಾಡಳಿತ ರಜೆ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳು ಮುಚ್ಚಿದ್ದವು. 20 ಕ್ಕೂ ಹೆಚ್ಚಿನ ಎತ್ತಿನ ಗಾಡಿಗಳಲ್ಲಿ ಹೋರಾಟಗಾರರು ಕುಳಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಒಂದು ಗಾಡಿಗೆ ಕಟ್ಟಿದ್ದ ಎತ್ತುಗಳು ಬೆದರಿ ಪೇಟೆ ಬೀದಿಯ ಕಡೆಗೆ ಓಡಲು ಆರಂಭಿಸಿದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡಿತು.
ರಾಜ್ಯ ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಡಿ.ಜಯರಾಮು, ಜಿಪಂ ಮಾಜಿ ಸದಸ್ಯ ಹನುಮಂತು, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಎಚ್.ಕೆಂಪಯ್ಯ, ಚಿಕ್ಕರಾಜು, ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ಜಯಸಿಂಹ, ಕುಮಾರ, ಮಾಜಿ ಸದಸ್ಯರಾದ ಮೆಹಬೂಬ್, ಎಂ.ಆರ್.ಮಹೇಶ್ ಇತರರು ಇದ್ದರು.
ಹೋಬಳಿ ಕೇಂದ್ರಗಳಲ್ಲೂ ಪ್ರತಿಭಟನೆ:
ಕಾವೇರಿ ಬಂದ್ ಬೆಂಬಲಿಸಿ ತಾಲೂಕಿನ ಕಿರುಗಾವಲಿನಲ್ಲಿ ಸ್ವಯಂ ಪ್ರೇರಿತರಾಗಿ ವರ್ತಕರು ಅಂಗಡಿ ಬಾಗಿಲು ಮುಚ್ಚಿ ಬೆಂಬಲಿಸಿದರು. ತಾಪಂ ಮಾಜಿ ಸದಸ್ಯ ನಟೇಶ್ ಹಾಗೂ ಕರವೇ ಕಾರ್ಯಕರ್ತ ನಾಗರಾಜು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಕಿರುಗಾವಲು ಸಂತೆಮಾಳದಲ್ಲಿ ಮೈಸೂರು ಮುಖ್ಯರಸ್ತೆಗೆ ಅಡ್ಡಲಾಗಿ ಕುಳಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಜಿ.ಪುರ ಗ್ರಾಮದಲ್ಲಿ ಅಂಗಡಿಗಳ ಬಾಗಿಲು ಮುಚ್ಚಲಾಗಿದ್ದು, ಯುವಕರ ತಂಡ ಪ್ರತಿಭಟನೆ ನಡೆಸಿ ರಸ್ತೆಯಲ್ಲಿ ಉರುಳಾಡಿದರು.
ಹಲಗೂರಿನಲ್ಲೂ ವಿವಿಧ ಸಂಘಟನೆಗಳು ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.