ವಿದ್ಯುತ್ ವಿತರಣಾ ಕೇಂದ್ರದಲ್ಲಿಯೇ ಗುಂಡು-ತುಂಡಿನ ಪಾರ್ಟಿ, ಅರೆಬೆತ್ತಲೆಯಾಗಿ ಅನುಚಿತ ವರ್ತನೆ, ಯಾರು ಈ ಜೆಇ-ಏನಿವನ ಕರಾಮತ್ತು?

MASALI HESCOM JE
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೆಇ ಗೊಲ್ಲಾಳಪ್ಪ ಪಾಟೀಲ ಮದ್ಯ ಸೇವಿಸಿ ಅರೆಬೆತ್ತಲೆಯಗಿ ಮಲಗಿರುವುದು.
Published on

ಇಂಡಿ: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಅಭಿಯಂತರ ಸರ್ಕಾರಿಯ ಕಚೇರಿಯನ್ನೇ ಗುಂಡು-ತುಂಡಿನ ಪಾರ್ಟಿಗೆ ಅಡ್ಡಾ ಮಾಡಿಕೊಂಡಿದ್ದಲ್ಲದೇ, ಅರೆಬೆತ್ತಲೆಯಾಗಿ ಮಲಗುವುದು, ಸಿಬ್ಬಂದಿಗೆ ಕಿರುಕುಳ ಕೊಡುವುದು, ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಮೂಲಕ ವ್ಯವಸ್ಥೆಗೆ ಕಳಂಕ ತಂದಿದ್ದಾನೆ.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಕಚೇರಿಯಲ್ಲಿಯೇ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದ್ದು, ಜೆಇ ಗೊಲ್ಲಾಳಪ್ಪ ಪಾಟೀಲ ಮದ್ಯ ಸೇವಿಸಿ ಬೇಜವಾಬ್ದಾರಿ ಪ್ರದರ್ಶಿಸಿದ ಭೂಪ.

ಕಳೆದ ಹಲವು ತಿಂಗಳುಗಳಿಂದ ಖಾಸಗಿ ವ್ಯಕ್ತಿಗಳನ್ನು ಕರೆದುಕೊಂಡು ಗುಂಡು-ತುಂಡಿನ ಪಾರ್ಟಿ ನಡೆಸುತ್ತಿದ್ದ ಈತ ರೈತರು ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು, ಮಾಹಿತಿ ನೀಡಲು ಹೋದರೆ ಗದರಿಸುತ್ತಿದ್ದನಲ್ಲದೇ ಒಳಗಡೆ ಪ್ರವೇಶವಿಲ್ಲವೆಂದು ಸಾಗ ಹಾಕುತ್ತಿದ್ದನು. ಒಳಗಡೆ ಇಂಥ ಅಂದಾದುಂಧಿ ನಡೆಸುತ್ತಿದ್ದನು.

ಗಡದ್ದಾಗಿ ಕುಡಿಯುವುದು, ಮಾಂಸಾಹಾರ ಸೇವಿಸಿ, ಬಟ್ಟೆ ಕಳಚಿ ಅರೆಬೆತ್ತಲೆಯಾಗಿ ಮಲಗುವುದು ಮಾಡುತ್ತಿದ್ದ ಈತ ಭಾನುವಾರ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತನ ಕರಾಮತ್ತು ಮೊಬೈಲ್‌ನಲ್ಲಿ ಸೆರೆ ಹಿಡಿದ ಗ್ರಾಮಸ್ಥರು ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈ ಹಿಂದೆಯೇ ಸಾಕಷ್ಟು ಬಾರಿ ಈತನ ಅವಾಂತರಗಳ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಇಡೀ ಗ್ರಾಮಸ್ಥರಿಗೆ ಈತ ವಾಕರಿಕೆ ತರಿಸುವಂತೆ ಮಾಡುತ್ತಿದ್ದು, ರೈತರು ವ್ಯವಸ್ಥೆಯ ಬಗ್ಗೆ ಆಕ್ರೋಶಗೊಂಡಿದ್ದಾರೆ.

ಆತ ಅರೆಬೆತ್ತಲೆಯಾಗಿ ಮದ್ಯ ಸೇವಿಸುತ್ತಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಘಟನೆ ಬಳಿಕ ಈತನನ್ನು ಅಮಾನತ್ತುಗೊಳಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರಾದರೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕೂಡಲೇ ಆತನನ್ನು ಅಮಾನತ್ತುಗೊಳಿಸಬೇಕಲ್ಲದೇ ಮತ್ತೆ ಯಾವುದೇ ಕಾರಣಕ್ಕೆ ಇದೇ ಕಚೇರಿಯಾಗಲಿ, ಅನ್ಯ ಕಚೇರಿಯಲ್ಲಾಗಲಿ ನೇಮಕ ಮಾಡಿಕೊಳ್ಳಕೂಡದೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net