

ಶೃಂಗೇರಿ: ಶೃಂಗೇರಿ ಶ್ರೀ ಜಗನ್ಮಾತೆ ಮಹೇಶ್ವರನ ಅರ್ಧಾಂಗಿಯಾಗಿ, ಕೈಯಲ್ಲಿ ತ್ರಿಶೂಲಧರಿಸಿ, ಚಂದ್ರರೇಖಾ ವಿಭೂಷಿತಳಾಗಿ ವೃಷಭವಾಹನಾರೂಢಳಾಗಿ ಭಕ್ತರನ್ನು ಅನುಗ್ರಹಿಸಿದಳು.
ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಲೋಕ ಕಂಟಕರಾದ ಮುಧು-ಕೈಟಭ, ಶುಂಭ-ನಿಶುಂಭ, ಮಹಿಷಾಸುರ ಮೊದಲಾದ ಮಹಾರಕ್ಷಸರನ್ನು ಕೊಂದ ಜಗನ್ಮಾತೆಯನ್ನು ನವರಾತ್ರಿ ಸಂದರ್ಭ ವಿಶೇಷವಾಗಿ ಪೂಜಿಸಲಾಗುತ್ತದೆ. ಶರತ್ಕಾಲದಲ್ಲಿ ಜಗನ್ಮಾತೆಗೆ ವಿಶೇಷ ಪೂಜೆ ಮಾಡಿ ದೇವಿ ಮಹಾತ್ಮೆಯನ್ನು ಪಠಿಸುವುದರಿಂದ ದೇವಿ ಸಂತುಷ್ಟಳಾಗಿ ಭಕ್ತರಿಗೆ ಸಕಲ ಸೌಖ್ಯ ನೀಡುತ್ತಾಳೆ ಎಂಬ ಪ್ರತೀತಿ ಇದೆ.
ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ದೇವಾಲಯ ಪ್ರವೇಶಿಸಿದ ನಂತರ ಬಂಗಾರ ರಥದಲ್ಲಿ ಶ್ರೀಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳ ಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಜಗನ್ಮಾತೆಗೆ ಮಹಾಮಂಗಳಾರತಿ,ಸರ್ವ ಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿತು.
ವೇದಗಳ ಪಾರಾಯಣ, ದೇವಿ ಭಾಗವತ, ಸೂತಸಂಹಿತೆ ಪಾರಾಯಣಗಳು. ಸೂರ್ಯ ನಮಸ್ಕಾರ, ಶ್ರೀಸೂಕ್ತಜಪ, ದುರ್ಗಾಜಪ ಶ್ರೀಮಠದಲ್ಲಿ ನೆರವೇರಿತು. ಉಭಯಶ್ರೀಗಳು ಶ್ರೀಶಾರದಾಪರಮೇಶ್ವರಿಗೆ ವಿಶೇಷಪೂಜೆ ಸಲ್ಲಿಸಿದರು. ಸಂಜೆ ಪ್ರವಚನ ಮಂದಿರದಲ್ಲಿ ಯತಿವರ್ಯರು ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ, ಉಯ್ಯಲೆ ಸೇವೆ ನೆರವೇರಿತು. ನಂತರ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೀದಿ ಉತ್ಸವದಲ್ಲಿ ಕುತೂಗೋಡು ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು, ಸಿದ್ಧಸಮಾ ಯೋಗದ ಧ್ಯಾನಿಗಳು, ಸದ್ಭಾವನಾ ಸಂಘ, ವೈಕುಂಠಪುರ ಗೆಳೆಯರ ಬಳಗ, ಗೋಚವಳ್ಳಿ ಸ್ಪೂರ್ತಿ ಯುವಕ ಸಂಘ, ಕನ್ಯಾಕುಮಾರಿ ರೈತಮಹಿಳಾ ಸ್ವಸಹಾಯ ಸಂಘ, ಕರ್ನಾಟಕ ಜಾನಪದ ಪರಿಷತ್ತು,ಯುವ ಒಕ್ಕಲಿಗರ ವೇದಿಕೆ ಮುಂತಾದ ಸಂಘ-ಸಂಸ್ಥೆಗಳು,ಶಾಲಾ ವಿದ್ಯಾರ್ಥಿಗಳು ಭಾಗಿಯಾದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನ್ನೆನ ರಾಮನಾಥ ಭಾಗವತ್ ಹಾಗೂ ಸಂಗಡಿಗರಿಂದ ಹಾಡುಗಾರಿಕೆ ನೆರವೇರಿತು.