

ಬೆಳಗಾವಿ: ಮೂರು ರಾಜ್ಯಗಳ ವ್ಯಾಪಾರ ವಹಿವಾಟು, ರಾಜಕೀಯ ಕೇಂದ್ರ ಬಿಂದುವಾಗಿ ರುವ ಬೆಳಗಾವಿ ನಗರದ ಅಭಿವೃದ್ಧಿಗೆ ಪಣತೊಟ್ಟಿರುವ ರಾಜ್ಯ ಸರ್ಕಾರ ಇದೀಗ ಬೃಹತ್ ಬೆಳಗಾವಿ ಮಹಾನಗರ ನಿರ್ಮಾಣಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಅತಿಹೆಚ್ಚು ಭೌಗೋಳಿಕ ವಿಸ್ತೀರ್ಣ, ವ್ಯಾಪಾರ ವಹಿವಾಟು, ಜನಸಂಖ್ಯೆ, ಐಟಿ-ಬಿಟಿ ಕಂಪನಿ ಹೊಂದಿರುವ ಬೆಂಗಳೂರು ಮಹಾನಗರದ ನಂತರದಲ್ಲಿ ಅತಿ ದೊಡ್ಡ ಮಹಾನಗರ ಖ್ಯಾತಿ ಬೆಳಗಾವಿಗಿದೆ. ಹೀಗಾಗಿ ಬೃಹತ್ ಮಹಾನಗರ ನಿರ್ಮಾಣ ಸಿದ್ಧತೆಗೆ ನಗರಾಭಿವೃದ್ಧಿ ಇಲಾಖೆ ಯೋಜನೆ ರೂಪಿಸುತ್ತಿದೆ. ಮೊದಲ ಹಂತದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವ್ಯಾಪ್ತಿಗೆ ಬೆಳಗಾವಿ ನಗರ ಸುತ್ತಮುತ್ತಲಿನ 20 ಹಳ್ಳಿಗಳ ಸೇರ್ಪಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ನಗರ ವರ್ಷದಿಂದ ವರ್ಷಕ್ಕೆ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ವಾಹನ ಸಂಚಾರ, ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. 2030ರ ವೇಳೆಗೆ ಬೆಳಗಾವಿ ನಗರದ ಭೌಗೋಳಿಕ ವಿಸ್ತೀರ್ಣ 120 ರಿಂದ 150 ಕಿ.ಮೀ. ಆಗಲಿದೆ. ಈ ಹಿನ್ನೆಲೆಯಲ್ಲಿ ನಗರ ಯೋಜನಾ ವ್ಯಾಪ್ತಿಯನ್ನು ವಿಸ್ತರಿಸುವುದು ಅನಿವಾರ್ಯವಾಗಿದ್ದು, ಇನ್ನಷ್ಟು ಹಳ್ಳಿಗಳನ್ನು ಮಹಾನಗರ ವ್ಯಾಪ್ತಿಗೆ ಸೇರ್ಪಡಿಸಲು ಯೋಜನೆ ರೂಪಿಸಲಾಗಿದೆ.
ಜನಸಂಖ್ಯೆಯೂ ಹೆಚ್ಚಳ: ಸದ್ಯ ಬೆಳಗಾವಿ ಮಹಾನಗರ 2011ರ ಜನಸಂಖ್ಯೆಯ ವರದಿ ಪ್ರಕಾರ 4,88,157 ಜನಸಂಖ್ಯೆ ಹೊಂದಿದೆ. ಆದರೆ, ವಿವಿಧ ಇಲಾಖೆಗಳ ಇತ್ತೀಚಿನ ಯೋಜನಾ ವರದಿಗಳ ಪ್ರಕಾರ ನಗರದಲ್ಲಿನ ಜನಸಂಖ್ಯೆ 15 ಲಕ್ಷ ದಾಟಿದೆ. ಮತ್ತೊಂದೆಡೆ ವಸತಿ ಬಡಾವಣೆಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಜನರ ಹಿತೃದೃಷ್ಟಿಯಿಂದ ಮತ್ತು ಅಭಿವೃದ್ಧಿಗಾಗಿ ನಗರ ಪ್ರದೇಶ ವಿಸ್ತರಣೆ ಮಾಡಬೇಕಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿರುವ ವಿಮಾನ ನಿಲ್ದಾಣವನ್ನು ನಗರ ಯೋಜನಾ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ನಗರದ ಸುತ್ತಮುತ್ತಲಿನ ಹಳ್ಳಿಗಳನ್ನು ಸೇರ್ಪಡೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬುಡಾ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ಹಳ್ಳಿಗಳ ಸೇರ್ಪಡೆ?: ಬೆಳಗಾವಿ ತಾಲೂಕಿನ ಸಾಂಬ್ರಾ, ನಿಲಜಿ, ಶಿಂಧೊಳ್ಳಿ, ಹಲಗಾ, ಮಚ್ಛೆ, ಹಿಂಡಲಗಾ, ಹೊನಗಾ, ಕಂಗ್ರಾಳಿ, ಮಂಡೊಳ್ಳಿ, ಮುತಗಾ, ಸಂತಿ ಬಸ್ತವಾಡ, ಸುಳಗಾ, ತುರಮುರಿ, ಬಾಚಿ, ಯಳ್ಳೂರ, ಅವಚಾರಟ್ಟಿ, ಸುಳಗಾ, ದೇಸೂರ, ಕಣಬರ್ಗಿ ಸೇರಿ ಇತರ ಹಳ್ಳಿಗಳು ಹಾಗೂ ಮುಕ್ತಿ ಮಠದವರಗಿನ ಪ್ರದೇಶವನ್ನು ಸ್ಥಳೀಯ ಯೋಜನಾ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.
ಅಕ್ರಮ ಬಡಾವಣೆಗಳಿಗೆ ಕಡಿವಾಣ: ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಯೋಜನೆಗಳಿಲ್ಲದೆ ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ಸ್ಥಳೀಯ ಗ್ರಾಪಂಗಳು ಅನುಮತಿ ನೀಡುತ್ತಿರುವುದರಿಂದ ನಗರ ಪ್ರದೇಶ ವಿಸ್ತೀರ್ಣಕ್ಕೆ ಅಡ್ಡಿಯಾಗಲಿದೆ. ಹಾಗಾಗಿ ಸುತ್ತಮುತ್ತಲಿನ ಗ್ರಾಮಗಳು ನಗರ ಯೋಜನಾ ವ್ಯಾಪ್ತಿಗೆ ಬಂದರೆ ಅಕ್ರಮ ಬಡಾವಣೆಗಳಿಗೆ ಕಡಿವಾಣ ಬೀಳಲಿದೆ. ಜತೆಗೆ ಬುಡಾ, ಪಾಲಿಕೆ, ನಗರ ಯೋಜನಾ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯಗೊಳ್ಳುವುದರಿಂದ ಅಕ್ರಮ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಎಂದು ಪಾಲಿಕೆ, ಬುಡಾ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲು ಸುತ್ತಮುತ್ತಲಿನ ಹಳ್ಳಿಗಳ ಸೇರ್ಪಡೆ ಮತ್ತು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣವನ್ನು ಸ್ಥಳೀಯ ಯೋಜನೆ ಪ್ರದೇಶದಲ್ಲಿ ಸೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.| ಪ್ರೀತಂ ನಸ್ಲಾಪುರೆ ಬುಡಾ ಆಯುಕ್ತ ಬೆಳಗಾವಿ ನಗರದ ಸುತ್ತಮುತ್ತಲಿನ ಹಳ್ಳಿಗಳನ್ನು ನಗರ ಯೋಜನಾ ವ್ಯಾಪ್ತಿಗೆ ತರುವ ಉದ್ದೇಶದಿಂದ ಬುಡಾ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ