

ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಚತುಷ್ಪಥ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಗುರುಪುರ ಕೈಕಂಬ ಜಂಕ್ಷನ್ ಬಳಿ ಒಂದಂತಸ್ತಿನ ವಾಣಿಜ್ಯ ಕಟ್ಟಡವೊಂದು 110 ಅಡಿಯಷ್ಟು ಸ್ಥಳಾಂತರಗೊಳ್ಳಲಿದೆ.
ಹರ್ಯಾಣದ ಎಚ್‌ಎಸ್‌ಬಿಎಲ್ ಬಿಲ್ಡಿಂಗ್ ಸೊಲ್ಯೂಶನ್ ಪ್ರೈ. ಲಿಮಿಟೆಡ್ ಕಂಪನಿ ಗುರುಪುರ ಕೈಕಂಬದ ವಾಣಿಜ್ಯ ಕಟ್ಟಡ ಸ್ಥಳಾಂತರ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ. ವಾಮಂಜೂರಿನಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ ಅಂಗಡಿ ಹಾಗೂ ಮನೆಯಿದ್ದ ಕಟ್ಟಡವನ್ನು ಎರಡು ತಿಂಗಳ ಹಿಂದೆ ಎಚ್‌ಎಸ್‌ಬಿಎಲ್ ಕಂಪನಿ 30 ಅಡಿಯಷ್ಟು ಸ್ಥಳಾಂತರಿಸಿತ್ತು.
ಕೈಕಂಬದಲ್ಲಿ ಸ್ಥಳಾಂತರಗೊಳ್ಳಲಿರುವ ಕಟ್ಟಡದ ಒಂದು ಪಾರ್ಶ್ವ ಹೆದ್ದಾರಿ ವಿಸ್ತರಣೆ ವ್ಯಾಪ್ತಿ ಪ್ರದೇಶವೆಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮ ಅನಿವಾರ್ಯವಾಗಿತ್ತು. ಆದರೆ ಮಾಲೀಕರು ಕಟ್ಟಡ ಸಂಪೂರ್ಣ ನೆಲಸಮಗೊಳಿಸದೆ ಅಥವಾ ಅರ್ಧದಷ್ಟು ಧ್ವಂಸಗೊಳಿಸದೆ ಕಟ್ಟಡವನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕೆಂದುಕೊಂಡಿದ್ದು, ಕಟ್ಟಡ ಸ್ಥಳಾಂತರಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಕಟ್ಟಡ ಸ್ಥಳಾಂತರಕ್ಕೆ ಮುನ್ನ ಮಾಲೀಕರು ಕೊಪ್ಪಳ, ಶಿರಗುಪ್ಪ ಮತ್ತು ಮಂಗಳೂರಿನಲ್ಲಿ(ವಾಮಂಜೂರು) ಎಚ್‌ಎಸ್‌ಬಿಎಲ್ ಕಂಪನಿ ನಡೆಸಿದ ಸ್ಥಳಾಂತರ ಪ್ರಕ್ರಿಯೆ ಗಮನಿಸಿದ್ದಾರೆ.
ಸ್ಥಳಾಂತರಗೊಳ್ಳಲಿರುವ ಹಳೆಯ ಕಟ್ಟಡದಲ್ಲಿದ್ದ ಕೆನರಾ ಬ್ಯಾಂಕ್ ಶಾಖೆ, ಮೆಸ್ಕಾಂ ಕಚೇರಿ, ಎಟಿಎಂ ಸಹಿತ ಹಲವು ವಾಣಿಜ್ಯ ವಹಿವಾಟು ಕೇಂದ್ರಗಳು ಮಾಲೀಕರ ಇನ್ನೊಂದು ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿದೆ. ಹಳೇ ಕಟ್ಟಡ ಹೊಸ ಕಟ್ಟಡದ ಬಳಿಗೆ ಸ್ಥಳಾಂತರಗೊಳ್ಳಲಿದೆ.
ಒಂದು ತಿಂಗಳಿಂದ ಕಟ್ಟಡದ ಸುತ್ತ ಅಗೆದು, ನೆಲದಡಿಯಿಂದ ಕಟ್ಟಡ ಆಧರಿಸಿ ಸುಮಾರು 500 ಜ್ಯಾಕ್ ಅಳವಡಿಸಲಾಗಿದೆ. ಮೊದಲಿಗೆ ಕಟ್ಟಡವನ್ನು 15 ಅಡಿ ಹಿಂದಕ್ಕೆ ಹಾಗೂ ಉತ್ತರ ದಿಕ್ಕಿಗೆ(ಎಡಕ್ಕೆ) 80 ಅಡಿ ಸರಿಸಲಾಗುತ್ತದೆ. ಇದಾದ ಬಳಿಕ ನಿಧಾನವಾಗಿ ಕಟ್ಟಡವನ್ನು 15 ಅಡಿ ಹಿಂದಕ್ಕೆ ಸರಿಸಲಾಗುವುದು. ಹೀಗೆ ಒಟ್ಟು 6000 ಚದರ ಅಡಿ ವಿಸ್ತೀರ್ಣದ ಕಟ್ಟಡವು 110 ಅಡಿಯಷ್ಟು ಸ್ಥಳಾಂತರಗೊಳ್ಳಲಿದೆ.
ಸೇತುವೆ ನಿರ್ಮಾಣದ ವೇಳೆ ಗರ್ಡರ್ ಸರಿಸಲು ಹಳಿ ಬಳಸುವಂತೆ ಕಟ್ಟಡ ಸರಿಸಲು ಅಡಿ ಭಾಗಕ್ಕೆ ಹಳಿ ಅಳವಡಿಸಲಾಗುತ್ತದೆ. ನಿಧಾನಗತಿಯಲ್ಲಿ ನಡೆಯಲಿರುವ ಈ ಕಾಮಗಾರಿ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಸ್ಥಳಾಂತರಕ್ಕೆ ಮುನ್ನ ಕಟ್ಟಡದ ಭಾರ ಸಮತೋಲನಗೊಳಿಸಲು ಖಾಲಿ ಜಾಗವಿರುವ ಎಲ್ಲ ಕಡೆ ಕೆಂಪು ಕಲ್ಲಿನಿಂದ ಭರ್ತಿ ಮಾಡಿ, ಮೇಲ್ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಜ್ಯಾಕ್ ಅಳವಡಿಸಲಾಗುತ್ತದೆ. ಕಂಪನಿಯು ಕೇರಳದಲ್ಲಿ ಯಶಸ್ವಿಯಾಗಿ 4 ಕಟ್ಟಡ ಸ್ಥಳಾಂತರಿಸಿದೆ ಎಂದು ಕಂಪನಿ ಇಂಜಿನಿಯರ್ ತಿಳಿಸಿದ್ದಾರೆ
ಶ್ರೀ ಸುಧೀಂದ್ರ ತೀರ್ಥ ಸ್ವಾಮಿ ಅವರಿಂದ 1999ರಲ್ಲಿ ಈ ಕಟ್ಟಡ ಉದ್ಘಾಟಿಸಲ್ಪಟ್ಟಿತ್ತು. ಭವಿಷ್ಯದಲ್ಲಿ ಹೆದ್ದಾರಿ ವಿಸ್ತರಣೆಗೊಂಡರೂ ಕಟ್ಟಡಕ್ಕೆ ಏನೂ ಆಗುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದರು. ಆ ಮಾತಿನ ಮೇಲೆ ನಂಬಿಕೆ ಇಟ್ಟು, ಕಟ್ಟಡ ಸ್ಥಳಾಂತರಕ್ಕೆ ಧೈರ್ಯ ಮಾಡಿದ್ದೇನೆ. ಇಲ್ಲಿ ಇಂತಹ ಮತ್ತೊಂದು ಕಟ್ಟಡ ನಿರ್ಮಿಸಲು 1 ಕೋಟಿ ರೂ. ಸಾಲದು. ಕಟ್ಟಡ ಸ್ಥಳಾಂತರಕ್ಕೆ ಸುಮಾರು 50 ಲಕ್ಷ ರೂ. ಖರ್ಚಾಗಬಹುದು.- ಜಿ. ರಾಜೇಶ್ ಪೈ, ಕಟ್ಟಡ ಮಾಲೀಕ