

ಕೊಪ್ಪಳ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಯಾಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ
ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿ ವರ್ಷ ಮಂಡಳಿಯಿಂದ ನೀಡಬೇಕಾದ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿಲ್ಲ. 2022-23ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ವರಿಗೆ ಈವರೆಗೂ ಸಹಾಯಧನ ಬಿಡುಗಡೆ ಆಗಿಲ್ಲ.
ಪ್ರಸಕ್ತ ವರ್ಷ ಅರ್ಜಿಯನ್ನೇ ಕರೆದಿಲ್ಲ. ಕಾನೂನು ಪ್ರಕಾರ ಪ್ರತಿ ವರ್ಷ ಕಲಿಕಾ ಭಾಗ್ಯ ಹೆಸರಿನಡಿ ಸಹಾಯಧನ ನೀಡಬೇಕು. ನಿಲ್ಲಿಸಿರುವುದರಿಂದ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ.
ಮಂಡಳಿ ಇತರ ಯೋಜನೆಗಳಿಗೆ ಅನುದಾನ ಲಭ್ಯವಿದೆ. ಆದರೆ, ಮಕ್ಕಳ ಕಲಿಕೆಗೆ ನೀಡಲು ಹಣವಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆ ಅನ್ವಯ ಕಲಿಕಾ ಸಾಮಗ್ರಿ ಖರೀದಿಸಿ ನೀಡಲು ಅವಕಾಶವಿಲ್ಲ.
ಆದರೆ, ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಖರೀದಿ ಪ್ರಕ್ರಿಯೆ ನಡೆಸುತ್ತಿದ್ದಾರೆಂದು ಆರೋಪಿಸಿದರು. 2022-23ನೇ ಸಾಲಿನ ಶೈಕ್ಷಣಿಕ ಸಹಾಯಧನ ಕೂಡಲೇ ಬಿಡುಗಡೆ ಮಾಡಿ.
2021-22ನೇ ಸಾಲಿನಲ್ಲಿ 1.5 ಲಕ್ಷ ಫಲಾನುಭವಿಗಳಿಗೆ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನ ಪಾವತಿಸಿ. ಪ್ರಸಕ್ತ ವರ್ಷ ಅರ್ಜಿ ಆಹ್ವಾನಿಸಿ. ಲ್ಯಾಪ್‌ಟಾಪ್, ಟ್ಯಾಬ್ ಖರೀದಿ ನಿಲ್ಲಿಸಿ. ಹಿಂದಿನ ಸರ್ಕಾರದಲ್ಲಿ ನಡೆದ ಖರೀದಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಪ್ರತಿಭಟನಕಾರರಾದ ಕಾಸಿಂ ಸರ್ದಾರ, ಇಸ್ಮಾಯಿಲ್ ಅಗಳಕೇರಾ, ರಂಗಪ್ಪ ದೊರೆ, ಮಂಜುನಾಥ ಡಗ್ಗಿ, ಮೆಹಬೂಬ ಮಣ್ಣೂರ, ದಾದಾಪೀರ, ನಾಗರಾಜ ಸಂಗಾಪುರ ಇತರರಿದ್ದರು.