ಕಾನೂನು ಬದ್ಧ ಸೌಲಭ್ಯ ಕಲ್ಪಿಸಿ

building labor protest in koppal
ವಿವಿಧ ಬೇಡಿಕೆ ಈಡೇರಿಸುವಂತೆ ಕಟ್ಟಡ ಕಾರ್ಮಿಕರು ಸೋಮವಾರ ಕೊಪ್ಪಳದಲ್ಲಿ ಚುನಾವಣಾ ತಹಸೀಲ್ದಾರ್​ ರವಿ ವಸ್ತ್ರದ್​ಗೆ ಮನವಿ ಸಲ್ಲಿಸಿದರು. ಸಂಟನೆ ಜಿಲ್ಲಾಧ್ಯಕ್ಷ ಖಾಸಿಂ ಸರ್ದಾರ, ಉಪಾಧ್ಯಕ್ಷ ಇಸ್ಮಾಯಿಲ್​ ಇಟಗಿ, ತಾಲೂಕು ಅಧ್ಯಕ್ಷ ಹನುಮೇಶ ಭೋವಿ, ಮುಖಂಡರಾದ ತುಕಾರಾಂ ಪಾತ್ರೋಟಿ, ಎಸ್​.ಎ.ಗಾರ, ಎ.ಎಲ್​.ತಿಮ್ಮಣ್ಣ, ಅಡಿವೆಪ್ಪ ಛಲವಾದಿ ಇದ್ದರು.
Published on

ಕೊಪ್ಪಳ: ಕಟ್ಟಡ ಕಾರ್ಮಿಕರಿಗೆ ಕಾನೂನು ಬದ್ಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಪದಾಧಿಕಾರಿಗಳು ಸೋಮವಾರ ನಗರದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಇಲಾಖೆಯಿಂದ ನಮಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಶೈಕ್ಷಣಿಕ, ಮದುವೆ ಸಹಾಯಧನ, ವೈದ್ಯಕಿಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಒಂದು ವರ್ಷದಿಂದ ವಿಲೇವಾರಿಯಾಗಿಲ್ಲ. ಮಾಸಾಶನ ನಿಂತುಹೋಗಿದೆ. ನಾವು ಕೇಳದಿದ್ದರೂ ಲ್ಯಾಪ್​ಟಾಪ್​, ಪೌಷ್ಟಿಕ್​ ಕಿಟ್​ ನೀಡಿದ್ದೀರಿ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ನೋಂದಣಿ, ನವೀಕರಣಕ್ಕೆ ಸಲ್ಲಿಸಿದ ಅರ್ಜಿಗಳನ್ನು ವಿನಾ ಕಾರಣ ತಿರಸ್ಕರಿಸಲಾಗುತ್ತಿದೆ. ಕಲ್ಯಾಣ ಮಂಡಳಿ ನಮ್ಮ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ತಕ್ಷಣ ನಿಲ್ಲಿಸಿದ ಸೌಲಭ್ಯ ನೀಡಬೇಕು. ವಿವಿಧ ಯೋಜನೆಗಳಡಿ ಸಲ್ಲಿಕೆಯಾದ ಅರ್ಜಿ ವಿಲೇವಾರಿ ಮಾಡಬೇಕು. ಕಿಟ್​ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ ತನಿಖೆ ನಡೆಸಬೇಕು. ಮಾಸಾಶನ ಬಿಡುಗಡೆ ಮಾಡಿ. ನೋಂದಣಿ, ನವೀಕರಣ ಅರ್ಜಿ ಸಕಾರಣವಿಲ್ಲದೇ ತಿರಸ್ಕರಿಸಬಾರದು. ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಕ್ರಮವಾಗಬೇಕು. ಬೋಗಸ್​ ಕಾರ್ಮಿಕರಿಂದ ನೈಜ ಕಾರ್ಮಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕಾರ್ಮಿಕ ಸಂಟನೆಗಳೊಂದಿಗೆ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಟನೆ ಜಿಲ್ಲಾಧ್ಯಕ್ಷ ಖಾಸಿಂ ಸರ್ದಾರ, ಉಪಾಧ್ಯಕ್ಷ ಇಸ್ಮಾಯಿಲ್​ ಇಟಗಿ, ತಾಲೂಕು ಅಧ್ಯಕ್ಷ ಹನುಮೇಶ ಭೋವಿ, ಮುಖಂಡರಾದ ತುಕಾರಾಂ ಪಾತ್ರೋಟಿ, ಎಸ್​.ಎ.ಗಾರ, ಎ.ಎಲ್​.ತಿಮ್ಮಣ್ಣ, ಅಡಿವೆಪ್ಪ ಛಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net