

ಕೊಪ್ಪಳ: ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ವಿವಿಧ ಕಿಟ್ ಹಂಚಿಕೆಯಲ್ಲಿ ನಡೆದ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಒತಾಯಿಸಿ ಕಟ್ಟಡ ಕಾರ್ಮಿಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಟ್ಟಡ ಕಾರ್ಮಿಕರ ಮಂಡಳಿಯಿಂದ ಕೋವಿಡ್‌ನಲ್ಲಿ 5 ಸಾವಿರ, 3 ಸಾವಿರ ರೂ. ಮೊತ್ತದ ಕಿಟ್ ವಿತರಿಸಲಾಗಿದೆ. ಇನ್ನು ಅನೇಕ ಕಿಟ್ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕಾರ್ಮಿಕರಿಗೆ ಮನೆ ನಿರ್ಮಿಸಲಾಗುತ್ತಿದೆ. ಆದರೆ, ಇದರಲ್ಲಿ ನಕಲಿ ಕಾರ್ಮಿಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕಾರ್ಮಿಕರಲ್ಲದವರು ಕಾರ್ಮಿಕ ಕಾರ್ಡ್ ಹೊಂದಿದ್ದು, ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸೆಸ್ ಸಂಗ್ರಹವೂ ನಿಗದಿತವಾಗಿ ನಡೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಿಟ್ ಹಗರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು. ನಕಲಿ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಕಿ ಶೈಕ್ಷಣಿಕ ಪ್ರೋತ್ಸಾಹಧನ ಬಿಡುಗಡೆಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಬೇಕು. ಕೊಳಚೆ ನಿರ್ಮೂಲನ ಮಂಡಳಿ ಮೂಲಕ ಮನೆ ನಿರ್ಮಾಣ ಕಾರ್ಯ ಕೈ ಬಿಡಬೇಕು.
ಮಂಡಳಿಯಿಂದ ಯಾವುದೇ ಅನುದಾನ ಬಿಡುಗಡೆ ಮಾಡಬಾರದು. ಈಗಾಗಲೇ ಬಿಡುಗಡೆ ಮಾಡಿದ ಅನುದಾನ ವಾಪಸ್ ಪಡೆಯಬೇಕು. ಸೆಸ್ ಸಂಗ್ರಹ ಮೊತ್ತವನ್ನು ಶೇ.1ರಿಂದ 2ಕ್ಕೆ ಹೆಚ್ಚಿಸಬೇಕು. ನಿಗದಿತವಾಗಿ ಸೆಸ್ ಸಂಗ್ರಹ ಮಾಡಬೇಕು. ಇಲಾಖೆ ಹೊರತುಪಡಿಸಿ ಹೊರಗಿನಿಂದ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಬಾರದು. ಪ್ರತ್ಯೇಕ ತಂತ್ರಾಂಶ ರಚಿಸಿ ಇಲಾಖೆಯಿಂದಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರಾದ ಎಚ್.ಗೌಡರ್, ಜಾಫರ್, ಗಫಾರ್, ಚನ್ನಬಸಪ್ಪ ಜಾಲಿಹಾಳ, ಹುಲುಗಪ್ಪ, ಗವಿಸಿದ್ದಯ್ಯ, ಮೌಲಾಸಾಬ್ ಕಪಾಲಿ, ತುಕಾರಾಂ ಪಾತ್ರೋಟಿ, ಮಾರುತಿ ಚಿನ್ನೂರು, ಮೆಹಬೂಬ್ ಇತರರಿದ್ದರು.