

ಬಾದಾಮಿ: ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀ ಸಿದ್ಧೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಫೆ. 20ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದರು.
ಸಂಘದ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2001ರಲ್ಲಿ ಆರಂಭವಾದ ಬ್ಯಾಂಕ್ 6 ಶಾಖೆಗಳನ್ನು ಹೊಂದಿದ್ದು 90 ಕೋಟಿ ರೂ. ಬಂಡವಾಳ ಹೊಂದಿದ್ದು, 66 ಕೋಟಿ ರೂ. ಠೇವಣಿ, 4 ಸಾವಿರ ಸದಸ್ಯರು ಹಾಗೂ ಗ್ರಾಹಕರಿಗೆ 60 ಕೋಟಿ ರೂ. ಸಾಲ ವಿತರಿಸಲಾಗಿದೆ. ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಬ್ಯಾಂಕ್ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದರು.
ಫೆ.20ರಂದು ಬೆಳಗ್ಗೆ 10.30ಕ್ಕೆ ಕಟ್ಟಡ ಉದ್ಘಾಟನೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೋಣ ಗುಲಗಂಜಿಮಠದ ಗುರುಪಾದ ಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಹಾಗೂ ಕಾಡಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕಟ್ಟಡವನ್ನು ಪಿ.ಸಿ. ಗದ್ದಿಗೌಡರ, ಲಾಕರನ್ನು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಉದ್ಘಾಟಿಸಲಿದ್ದಾರೆ.
ಎಸ್.ಜಿ. ನಂಜಯ್ಯನಮಠ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ಅನಾವರಣಗೊಳಿಸುವರು. ಕ್ಯಾಶ್ ಕೌಂಟರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಸಭಾಭವನವನ್ನು ಮಾಜಿ ಶಾಸಕ ರಾಜಶೇಖರ ಶೀಲವಂತರ ಹಾಗೂ ಲಿಂಗರಡ್ಡಿ ಕುರ್ತಕೋಟಿ, ಗಣಕಯಂತ್ರವನ್ನು ಬಿ.ಪಿ. ಹಳ್ಳೂರ ಮತ್ತು ಮಹಾಂತೇಶ ಮಮದಾಪೂರ ಉದ್ಘಾಟಿಸಲಿದ್ದಾರೆ.
ಫೆ. 21ರಂದು ಸಂಜೆ 6.30ಕ್ಕೆ ಹುಚ್ಚರ ಸಂತೆ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಅಂದಾನಗೌಡ ಶಂಕರಗೌಡ ಗೌಡರ ಉದ್ಘಾಟಿಸಲಿದ್ದು, ಹೊಳೆ ಆಲೂರಿನ ಯಚ್ಚರಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಫೆ.22 ರಂದು ಸಂಜೆ 6.30ಕ್ಕೆ ಮಲ್ಲಗಂಬ ಪ್ರದರ್ಶನ ನಡೆಯಲಿದ್ದು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಉದ್ಘಾಟಿಸಲಿದ್ದಾರೆ. ರೋಣ ಬೂದೀಶ್ವರಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಫೆ.23 ರಂದು ಸಂಜೆ 6.30ಕ್ಕೆ ಬಿಗ್‌ಬಾಸ್ ವಿನ್ನರ್ ಹನುಮಂತ ಲಮಾಣಿ ಅವರ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಾಜಿ ಜಿ.ಪಂ. ಸದಸ್ಯ ಎ್.ಆರ್. ಪಾಟೀಲ ಉದ್ಘಾಟಿಸಲಿದ್ದು, 1008 ಗುರುಸಿದ್ಧ ಪಟ್ಟಾದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದು ಶಾಂತಗೌಡ ಪಾಟೀಲ ತಿಳಿಸಿದರು. ಉಪಾಧ್ಯಕ್ಷ ಅಂದಾನಗೌಡ ಗೌಡರ, ಅಬ್ದುಲ್ ಬಾಗವಾನ ಇದ್ದರು.