

ಹುಬ್ಬಳ್ಳಿ: ನಿಯಮಗಳನ್ನೆಲ್ಲ ಗಾಳಿಗೆ ತೂರಿ ಹೆದ್ದಾರಿ ಪಕ್ಕದಲ್ಲಿಯೇ ಕಟ್ಟಡವೊಂದು ತಲೆ ಎತ್ತುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ನಗರದ ಕೇಶ್ವಾಪುರ ಸವೋದಯ ವೃತ್ತದ ಬಳಿ ಬಾರಾಕೊಟ್ರಿಗೆ ಹೋಗುವ ಮಾರ್ಗಕ್ಕೆ ಹೊಂದಿಕೊಂಡು, ವಿಜಯಪುರ-ಹುಬ್ಬಳ್ಳಿ ಹೆದ್ದಾರಿ ಅಂಚಿನಲ್ಲೇ ಅವಸರದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, ನಿಯಮಗಳ ಪಾಲನೆಯಾಗಿಲ್ಲ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ಹೀಗಾಗಿ ಪತ್ರಿಕಾಲಯಕ್ಕೂ, ಪಾಲಿಕೆ ಕಚೇರಿಗೂ ಅನೇಕರು ಗಮನಕ್ಕೆ ತಂದಿದ್ದರು.
ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದವರು ಮಹಾನಗರ ಪಾಲಿಕೆಯಿಂದ ಪರವಾನಗಿಯನ್ನೂ ಪಡೆದಿಲ್ಲ. ಯಾವುದೇ ಕಟ್ಟಡ ನಿರ್ಮಾಣ ಮುನ್ನ ಪಾಲಿಕೆಯಿಂದ ಪರವಾನಗಿ ಪಡೆಯಲು ಆನ್ಲೈನ್ ಅರ್ಜಿ ಪಡೆಯಬೇಕಾಗುತ್ತದೆ. ಇನ್ನು ಹೆದ್ದಾರಿ ಪಕ್ಕದಲ್ಲಿ ಕಟ್ಟಡ ನಿರ್ವಿುಸಬೇಕಾದರೆ ಹೆದ್ದಾರಿಯ ಮಧ್ಯದ ಸ್ಥಳದಿಂದ ಕನಿಷ್ಠ 15 ಮೀಟರ್ ಅಂತರವನ್ನಾದರೂ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಈ ಯಾವುದೇ ನಿಯಮವನ್ನು ಕಟ್ಟಡ ನಿರ್ವಿುಸುತ್ತಿರುವವರು ಪಾಲಿಸಿಲ್ಲ ಎಂಬುದು ಸಾರ್ವಜನಿಕರ ದೂರು. ಹೀಗಾಗಿ ವಲಯ ಕಚೇರಿ ನಂ. 8ರ ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಅವರು ಮಂಗಳವಾರ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಪಾಲಿಕೆ ನಗರ ಯೋಜನೆ ಅಧಿಕಾರಿಗಳು ಸಹ ಸ್ಥಳ ಪರಿಶೀಲಿಸಿದ್ದಾರೆ. ಕಟ್ಟಡವನ್ನು ಅನಧಿಕೃತವಾಗಿ ನಿರ್ವಿುಸುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳು ಸಂಬಂಧಿಸಿದವರಿಗೆ ಬುಧವಾರ ನೋಟಿಸ್ ಅನ್ನೂ ನೀಡಿದ್ದಾರೆ.
ಹೆದ್ದಾರಿ ಪಕ್ಕದಲ್ಲಿ ಕಟ್ಟಡ ನಿರ್ವಿುಸುತ್ತಿರುವವರು ಪರವಾನಗಿಗಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ. ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಸವೋದಯ ಸರ್ಕಲ್ ಮಾತ್ರವಲ್ಲ; ನಗರದ ಇನ್ನೂ ಕೆಲವೆಡೆ ರಾತ್ರಿ ಬೆಳಗಾಗುವಷ್ಟರಲ್ಲಿ ಹೊಂಡ ತೆಗೆದು ಪಿಲ್ಲರ್ ಎಬ್ಬಿಸಿ ಕಟ್ಟಡ ಕಟ್ಟುವವರಿದ್ದಾರೆ. ಹಾಡು ಹಗಲೇ ನಿಯಮಗಳನ್ನು ಉಲ್ಲಂಘಿಸಿ ಮನಬಂದಂತೆ ಕಟ್ಟಡಗಳನ್ನು ನಿರ್ವಿುಸುತ್ತಿರುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಅಂದಾಗ ಮಾತ್ರ ಸ್ಮಾರ್ಟ್ಸಿಟಿ ಯೋಜನೆ ಸಾರ್ಥಕವಾದೀತು. ಅದಲ್ಲದಿದ್ದರೆ ಕಾನೂನು ಗಾಳಿಗೆ ತೂರುವವರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಸವೋದಯ ವೃತ್ತದ ಬಳಿ ನಿರ್ವಣಗೊಳ್ಳುತ್ತಿರುವ ಕಟ್ಟಡ ಹೆದ್ದಾರಿಯ ಮಧ್ಯದ ಸ್ಥಳದಿಂದ ಎಷ್ಟು ಅಂತರದಲ್ಲಿ ಇದೆ ಎಂಬುದನ್ನು ಪರಿಶೀಲಿಸಬೇಕಿದೆ. ಪಾಲಿಕೆಯಿಂದ ಪರವಾನಗಿ ಪಡೆಯದಿರುವ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದೇವೆ.- ವಿಠ್ಠಲ ತುಬಾಕೆ, ನಗರ ಯೋಜನೆ ಉಪ ನಿರ್ದೇಶಕ (ಪ್ರಭಾರಿ), ಮಹಾನಗರ ಪಾಲಿಕೆ