ಪುರಸಭೆಯಿಂದ ಕಟ್ಟಡ ನೆಲಸಮ ಕಾರ್ಯಾಚರಣೆ

ank
Published on

ಆನೇಕಲ್: ತಾಲೂಕಿನ ಕಿತ್ತಗಾನ ಹಳ್ಳಿಯಲ್ಲಿ ಸೋಮವಾರ ಸಂಭವಿಸಿದ್ದ ಸಿಲಿಂಡರ್ ಲಿಕೇಜ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಹಾನಿಗೊಳಗಾದ ಕಟ್ಟಡ ತೆರವಿಗೆ ಪುರಸಭೆ ಸಿಬ್ಬಂದಿ ಮುಂದಾಗಿದ್ದಾರೆ.

ಸ್ಟೋಟದಿಂದ ಕಟ್ಟಡದ ಒಂದು ಮಹಡಿಯೇ ಧ್ವಂಸವಾಗಿದ್ದು ಇಡೀ ಕಟ್ಟಡದ ಸ್ಥಿತಿ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಕ್ರಮವಾಗಿ ಕಟ್ಟಡ ತೆರವುಗೊಳಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುನಿಲ್ ಎಂಬುವರ ಮಾಲೀಕತ್ವದ ಮನೆಯ ಎರಡನೇ ಮಹಡಿಯಲ್ಲಿ ಸ್ಟೋಟ ಸಂಭವಿಸಿತ್ತು. ಸ್ಟೋಟದ ತೀವ್ರತೆಗೆ ಗೋಡೆಗಳು ಕುಸಿದಿವೆ. ಸೋಮವಾರ ಅಗ್ನಿಶಾಮಕ ದಳ ಸೇರಿ ವಿವಿಧ ಇಲಾಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ತೆರವಿಗೆ ವರದಿ ನೀಡಿದ್ದಾರೆ. ಬೊಮ್ಮಸಂದ್ರ ಪುರಸಭೆ ಮುಖ್ಯಾಧಿಕಾರಿ ರಾಜೇಂದ್ರ ನೇತೃತ್ವದಲ್ಲಿ ಸಿಬ್ಬಂದಿ ಮೂರನೇ ಮಹಡಿ ತೆರವು ಕಾರ್ಯಚರಣೆ ಆರಂಭಿಸಿದ್ದಾರೆ. ನುರಿತ ಕೆಲಸಗಾರರ ತಂಡ ಜಾಕ್‌ರಾಡ್‌ಗಳನ್ನು ಬಳಸಿ ಒಂದಾದ ನಂತರ ಮತ್ತೊಂದು ಮಹಡಿಗಳ ನೆಲಸಮ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಗಾಯಾಳುಗಳು ಚೇತರಿಕೆ: ಸ್ಟೋಟದಿಂದ ಗಾಯಗೊಂಡಿದ್ದ ವಿಷ್ಣು ಜಯರಾಜ್ ಹಾಗೂ ಸುನಿಲ್ ಜೋಸೆಪ್ ಎಂಬುವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಂಗಳವಾರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಸ್ ಏಜೆನ್ಸಿ ಅಧಿಕಾರಿಗಳನ್ನು ತನಿಖೆ ಮಾಡಲಾಗುತ್ತಿದೆ, ಮುಂಜಾಗ್ರತಾ ಕ್ರಮವಾಗಿ ಪ್ರಕರಣ ನಡೆದ ಕಟ್ಟಡದ ಅಕ್ಕಪಕ್ಕದ ಮನೆಯವರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ಪ್ರಕರಣ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಇಡೀ ಕಟ್ಟಡ ತೆರವು ಮಾಡಬೇಕು ಎನ್ನುವುದು ವಿವಿಧ ಇಲಾಖೆ ಅಧಿಕಾರಿಗಳ ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಮೂರನೇ ಮಹಡಿ ತೆರವು ಮಾಡಲಾಗುತ್ತಿದೆ ಹಂತಹಂತವಾಗಿ ಇಡೀ ಕಟ್ಟಡ ತೆರುವು ಮಾಡಲಾಗುವುದು.

ರಾಜೇಂದ್ರ, ಸಿಇಒ ಬೊಮ್ಮಸಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net