

ಆಲ್ದೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಡಳಿತದಿಂದ ಭಾರತದ ಶತ್ರುರಾಷ್ಟ್ರ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರಿ ಕುಳಿತಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಾರಾಯಣಗುರು ಸಮುದಾಯ ಭವನದಲ್ಲಿ ಬಿಜೆಪಿ ಹೋಬಳಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಮನಮೋಹನ್ ಸಿಂಗ್ ಸರ್ಕಾರ ಆಡಳಿತ ನಡೆಸುವ ಸಂದರ್ಭದಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿದರೆ ಭಾರತ ಅಮೇರಿಕದ ಮುಂದೆ ಅವಲತ್ತುಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದು ಭಾರತ ಬಲಿಷ್ಟವಾಗಿ ಬೆಳೆೆದು ನಿಂತಿದ್ದು ,ಅಮೇರಿಕಾಕ್ಕೆ ಸೆಡ್ಡು ಹೊಡೆಯುವ ಹಂತಕ್ಕೆ ಮೋದಿ ಅವರ ಆಡಳಿತ ಸಾಕ್ಷಿಯಾಗಿದೆ ಎಂದರು.
ಸಮೃದ್ಧ, ಸಮರ್ಥ, ಸ್ವಾಭಿಮಾನಿ, ಶಕ್ತಿಶಾಲಿ ಭಾರತವನ್ನು ನಿರ್ಮಾಣ ಮಾಡುವ ಹಂತಕ್ಕೆ ಭಾರತ ಬಂದು ನಿಂತಿರುವುದು ಭಾರತೀಯರಿಗೆ ಇದು ಹೆಮ್ಮೆಯ ವಿಚಾರ. ಕರ್ನಾಟಕದ ಉಪಮುಖ್ಯಮಂತ್ರಿ ಚಾಮುಂಡೇಶ್ವರಿ ಹಿಂದುಗಳ ಆಸ್ತಿ ಅಲ್ಲ, ಎಲ್ಲರ ಆಸ್ತಿ ಎಂದು ಹೇಳುತ್ತಾರೆ. ಸರ್ವ ಧರ್ಮದವರನ್ನು ಸಮಾನವಾಗಿ ನೋಡುತ್ತೇವೆ ಎಂದು ಪ್ರಮಾಣವಚನ ಸ್ವೀಕಾರ ಮಾಡಿ ಹಿಂದುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಅವರ ನೈತಿಕತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಎಂಎಲ್ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಬಿಜೆಪಿ ದೇಶ ಮೊದಲು ನಂತರ ಪಕ್ಷ, ನಂತರ ನಾನು ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿದೆ. ಬಲಿಷ್ಠ ಹಿಂದು ರಾಷ್ಟ್ರ ನಿರ್ಮಿಸುವುದು ನಮ್ಮ ಮೂಲ ಗುರಿಯಾಗಿದೆ. ದೇಶದ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಎಲ್ಲ ಸಮಸ್ಯೆಗಳನ್ನು ಎದರಿಸುವ ಶಕ್ತಿ ಇದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನನ್ನ ಹೋರಾಟ ಆರಂಭವಾಗಿದ್ದು, ಆಲ್ದೂರಿನಿಂದ, ನನ್ನ ಹುಟ್ಟೂರಾದ ಚಿಕ್ಕಮಾಗರವಳ್ಳಿ ಗ್ರಾಮದ ಬೂತ್ ಅಧ್ಯಕ್ಷನಾಗಿ 37ವರ್ಷಗಳ ಹಿಂದೆ ಪಯಣ ಆರಂಭಿಸಿ ಸಾಮಾನ್ಯ ಕಾರ್ಯಕರ್ತನಾಗಿ ಹೋಬಳಿಯಿಂದ ರಾಜ್ಯ,ರಾಷ್ಟ್ರಮಟ್ಟದ ಜವಾಬ್ದಾರಿಗಳನ್ನು ನಿರ್ವಹಿಸಲು ಪಕ್ಷ ನನಗೆ ಅವಕಾಶ ಕೊಟ್ಟಿದೆ ಎಂದರು. ಬೇರೆ ಪಕ್ಷಗಳಲ್ಲಿ ಮಾಲೀಕರಿರುತ್ತಾರೆ.ಆದರೆ ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು, ನರೇಂದ್ರ ಮೋದಿ ಅವರು ನಮ್ಮ ನಾಯಕರು ಎಂದರು.