ವ್ಯಸನಮುಕ್ತ ಸಮಾಜ ನಿರ್ಮಾಣ ಆದ್ಯ ಕರ್ತವ್ಯ

ವ್ಯಸನಮುಕ್ತ ಸಮಾಜ ನಿರ್ಮಾಣ ಆದ್ಯ ಕರ್ತವ್ಯ
Published on

ಪಿರಿಯಾಪಟ್ಟಣ: ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಪಟ್ಟಣದ ನ್ಯಾಯಾಲಯದ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ಆರ್.ಯೋಗೇಶ್ ತಿಳಿಸಿದರು.

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಾಲೂಕಿನ ಹಿಟ್ಟನೇಹೆಬ್ಬಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ, ಮಾನವ ಜನ್ಮವು ಹಲವಾರು ಜನ್ಮಗಳನ್ನು ಕಳೆದ ನಂತರ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ ಈ ಮಾನವ ಜನ್ಮವನ್ನು ಒಳಿತು ಮಾಡಲು ಉಪಯೋಗಿಸೋಣ ಎಂದರು.

ನಿರ್ದಿಷ್ಟವಾದ ಗುರಿಯನ್ನು ತಲುಪಲು ಪರಿಶ್ರಮವಿರಬೇಕು ಹಂತ ಹಂತವಾಗಿ ಗುರಿಯನ್ನು ತಲುಪಲು ಪ್ರಾಮಾಣಿಕ ಪ್ರಯತ್ನವಿರಬೇಕು ಎಂದರು. ತಂಬಾಕು, ಗುಟ್ಕಾ, ಪಾನ್ ಪರಾಗ್ ಸೇರಿದಂತೆ ವಿವಿಧ ಬಗೆಯ ಮಾದಕ ಪದಾರ್ಥಗಳನ್ನು ಪ್ರಚಾರ ಮಾಡಬಾರದು ಎಂಬ ಕಾನೂನು ಇದೆಯಾದರೂ ದೊಡ್ಡ ದೊಡ್ಡ ಸಿನಿಮಾ ನಟ ನಟಿಯರನ್ನು ಬಳಸಿಕೊಂಡು ಹೆಸರು ಹೇಳದೆ ಅಮಾಯಕ ಯುವ ಪೀಳಿಗೆಯನ್ನು ದುಶ್ಚಟಗಳಿಗೆ ದಾಸರನ್ನಾಗಿ ಮಾಡಿ ಕಂಪನಿಯವರು ಲಾಭ ಮಾಡುತ್ತಾರೆ. ಆದರೆ, ಸಮಾಜದಲ್ಲಿ ಧೂಮಪಾನ ಹಾಗೂ ಮದ್ಯಪಾನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಸರ್ಕಾರಿ ಸಹಾಯಕ ಅಭಿಯೋಜಕರಾದ ಆರ್.ಕೆ.ಶ್ರೀನಾಥ್, ಪೊಲೀಸ್ ಇನ್‌ಸ್ಪ್ಪೆಕ್ಟರ್ ಗೋವಿಂದರಾಜು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ವಕೀಲರ ಸಂಘದ ಕಾರ್ಯದರ್ಶಿ ಕೆ.ಶಂಕರ್, ವಕೀಲ ಹರೀಶ್, ಶ್ರೀನಿವಾಸ್, ವಿನೋದ್, ಅನಿಲ್ ಕುಮಾರ್, ಜಯಶಂಕರ್, ಜಗಪಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net