

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನಲ್ಲಿ 150 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಟೊಮ್ಯಾಟೊ ಮಾರುಕಟ್ಟೆ ಮತ್ತು 50 ಎಕರೆ ಪ್ರದೇಶದಲ್ಲಿ ಜಾನವಾರು ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ, ಮಾತನಾಡಿ, ಸಮಗ್ರ ದೂರದೃಷ್ಟಿಯನ್ನಿಟ್ಟುಕೊಂಡು ಮುಂದಿನ ದಿನಗಳಲ್ಲಿ ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲಕರ ನಾನಾ ಯೋಜನೆಗಳನ್ನು ರೂಪಿಸಲಾಗುವುದು. ಇಲ್ಲಿನ ಟೊಮ್ಯಾಟೊ ಮಾರುಕಟ್ಟೆಯ ವಿಸ್ತೀರ್ಣ ಎಂಟು ಎಕರೆ. ಇಲ್ಲಿನ ವಹಿವಾಟಿನ ಲೆಕ್ಕಾಚಾರದಲ್ಲಿ ಜಾಗ ಸಾಕಾಗುತ್ತಿಲ್ಲ ಎಂದರು.
50 ಎಕರೆ ಪ್ರದೇಶದಲ್ಲಿ ವಹಿವಾಟಿಗೆ ವಿಶಾಲವಾದ ಜಾಗ, ಶೆಡ್ಗಳ ನಿರ್ಮಾಣ, ದೊಡ್ಡ ರಸ್ತೆಗಳ ನಿರ್ಮಾಣ, ಕೊಳೆತ ಟೊಮ್ಯಾಟೊ ಶೇಖರಣೆ ಮತ್ತು ವಿಲೇವಾರಿಗೆ ಸಂಸ್ಕರಣಾ ಟಕ ಸ್ಥಾಪನೆ ಸೇರಿದಂತೆ ನಾನಾ ಸೌಕರ್ಯಗಳನ್ನೊಳಗೊಂಡಂತೆ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಿರ್ಮಿಸಿರುವ ಮಾರುಕಟ್ಟೆಯು ನಿರೀೆಗೆ ಅನುಗುಣವಾಗಿ ಇಲ್ಲ. ಹಿಂದೆ ಮೊದಲ ಬಾರಿಗೆ ಶಾಸಕನಾಗಿದ್ದಾಗ ಮಾದರಿ ಟೊಮ್ಯಾಟೊ ಮಾರುಕಟ್ಟೆ ನಿರ್ಮಾಣದ ಅಧ್ಯಯನಕ್ಕಾಗಿ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಸಫಲ್ ಮಾರುಕಟ್ಟೆಗೆ ಅಂದಿನ ಎಪಿಎಎಂಸಿ ಅಧ್ಯಕ್ಷರು, ನಿರ್ದೇಶಕರು ಮತ್ತು ವ್ಯಾಪಾರಿಗಳನ್ನು ಕರೆದುಕೊಂಡು ಹೋಗಿದ್ದು ಆಗ ಇದು ಸಾಧ್ಯವೇ? ಎಂಬುದಾಗಿ ಕೆಲವರು ಹೀಯಾಳಿಸಿದ್ದರು ಎಂದು ತಿಳಿಸಿದರು.
ಇಲ್ಲಿನ ಮಾರುಕಟ್ಟೆಯಲ್ಲಿ ನಿರೀಸಿದಷ್ಟು ಯೋಜನೆಗಳು ಅನುಷ್ಠಾನಗೊಂಡಿಲ್ಲ. ಅಂಗಡಿಯಲ್ಲಿ ಒಂದು ಕಡೆ ಲೋಡಿಂಗ್, ಮತ್ತೊಂದು ಕಡೆ ಅನ್ ಲೋಡಿಂಗ್ ವ್ಯವಸ್ಥೆ ರೂಪಿಸಿದ್ದರೂ ಪಾಲಿಸುತ್ತಿಲ್ಲ. ಇನ್ನು ವರಮಾನ ಕ್ರೋಡಿಕರಣದ ವೇಬ್ರಿಡ್ಜ್ ಸಹ ಇಲ್ಲ ಎಂದರು.
ಅಧಿಕಾರಿಗಳ ಬೇಜಾಬ್ದಾರಿಯ ಕೆಲಸದಿಂದ ಕನಿಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಒಳ್ಳೆಯ ಜಾಗವನ್ನು ಡ್ರೀಮಡ್ ಫಾರೆಸ್ಟ್ಗೆ ವಹಿಸಲಾಗಿದೆ. ಜತೆಗೆ ಚಿನ್ನಸಂದ್ರ, ಹೆಬ್ಬರಿ, ತಳಗವಾರ ಕೆರೆಗಳನ್ನು ಸಹ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿಸಲಾಗಿದೆ. ಇಷ್ಟಾನುಸಾರ ಮತ್ತು ಬೇಜವಾಬ್ದಾರಿಯಿಂದ ಅಧಿಕಾರಿಗಳು ಕೆಲಸ ಮಾಡಿದ್ದಾರೆಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಎಪಿಎಂಸಿ ಮಾರುಕಟ್ಟೆಯ ಆಡಳಿತಾಧಿಕಾರಿಗಳೂ ಆಗಿರುವ ತಹಸೀಲ್ದಾರ್ ಸುದರ್ಶನ್ ಯಾದವ್, ಪೌರಾಯುಕ್ತ ಜಿ.ಎನ್.ಚಲಪತಿ, ಎಪಿಎಂಸಿ ಕಾರ್ಯದರ್ಶಿ ಸುನೀತಾ, ಕಾರ್ಯನಿರ್ವಾಹಕ ಅಭಿಯಂತರಾದ ವಿವೇಕ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತೀಶ್ ಮತ್ತಿತರರು ಇದ್ದರು.
ಇಂದಿರಾ ಕ್ಯಾಂಟಿನ್ಗೆ ಭೇಟಿ
ಸಚಿವರು ಮಾರುಕಟ್ಟೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ, ಹೊರ ಮತ್ತು ಒಳಾಂಗಣ, ಶುಚಿತ್ವ, ಆಹಾರದ ಗುಣಮಟ್ಟ ಪರಿಶೀಲಿಸಿದರು. ಜತೆಗೆ ಅಲ್ಲಿಯೇ ತಿಂಡಿ ಸವಿದರು. ಇದೇ ವೇಳೆ ಸಿಬ್ಬಂದಿಯಿಂದ ನಿರ್ವಹಣೆಯ ಮಾಹಿತಿ ಪಡೆದುಕೊಂಡರು.
ಅವೈಜ್ಞಾನಿಕ ಕಾಮಗಾರಿ, ತರಾಟೆ
ಎಪಿಎಂಸಿಯ ಟೊಮ್ಯಾಟೊ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಗಳಿಗೆ ಸಚಿವರು ಅಸಮಾಧಾನಪಡಿಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರುಕಟ್ಟೆ ಪ್ರವೇಶಿಸುವ ಊಲವಾಡಿ ರಸ್ತೆಯಲ್ಲಿನ ಚರಂಡಿ, ಚೇಳೂರು ರಸ್ತೆಯಲ್ಲಿರುವ ಸಾರ್ವಜನಿಕ ಶೌಚಗೃಹವನ್ನು ಪರಿಶೀಲಿಸಿದರು. ಸೇರಿದಂತೆ ಹಲವಾರು ವ್ಯಾಪಾರ ಸ್ಥರು ಮತ್ತಿತರರು ಹಾಜರಿದ್ದರು.
ವ್ಯಾಪಾರಿಗಳೊಂದಿಗೆ ಸಂವಾದ
ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು, ದಳ್ಳಾಳಿಗಳು, ಹಮಾಲಿಗಳು ಮತ್ತು ರೈತರೊಂದಿಗೆ ಸಚಿವರು ಸಂವಾದ ನಡೆಸಿದರು. ವೈಯಕ್ತಿಕ ಬದುಕೇ ಮುಖ್ಯವಲ್ಲ. ನಮ್ಮನ್ನು ಕನಿಷ್ಠ ಹತ್ತು ಜನ ನೋಡಿ, ಬದುಕುವಂತಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದ ಸಚಿವರು, ಶುಚಿತ್ವ ನಿರ್ವಹಣೆಗೆ ಸಲಹೆ ನೀಡಿದರು.