

ಮೊಳಕಾಲ್ಮೂರು: ಪ್ರಗತಿಪರ ಆಡಳಿತದಲ್ಲಿ ಹಸಿವುಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪವೇ ಕಾಂಗ್ರೆಸ್ ಸರ್ಕಾರದ ಮುಖ್ಯ ಗುರಿ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ತಾಲೂಕು ಹಾಗೂ ಗ್ರಾಪಂ ಆಡಳಿತದ ಸಹಭಾಗಿತ್ವದಲ್ಲಿ ತಾಲೂಕಿನ ದೇವಸಮುದ್ರದ ಗ್ರಾಪಂ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆ ಸಂದರ್ಭ ಕೊಟ್ಟ ವಾಗ್ದಾನಗಳನ್ನು ನಂಬಿ ಅಧಿಕಾರ ಕೊಟ್ಟ ಜನರ ಋಣ ತೀರಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಕ್ರೂಡೀಕರಣ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವಿಸಿರುವುದು ಸಹಜ. ಆದರೆ, ಆರ್ಥಿಕ ಚಿಂತಕ ಸಿದ್ದರಾಮಯ್ಯ ಬದ್ಧತೆ ಎಲ್ಲ ಸವಾಲುಗಳನ್ನು ಮೆಟ್ಟಿ ಜನಪರ ಆಡಳಿತ ನೀಡುತ್ತಿರುವುದು ದೇಶಕ್ಕೆ ಮಾದರಿ ಎಂದರು.
ಸಚಿವ ಸಂಪುಟದ ಸಹದ್ಯೋಗಿಗಳು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವಲ್ಲಿ ನಿಪುಣತೆ ಹೊಂದಿರುವ ಸಿದ್ದರಾಮಯ್ಯ, ರಾಜ್ಯವನ್ನು ಮಾದರಿ ಆಗಿ ಅಭಿವೃದ್ಧಿಗೊಳಿಸಲು ಶ್ರಮಿಸಿದ್ದು, ಮುಖ್ಯವಾಗಿ ಹಸಿವುಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯನಿರ್ಹಹಿಸುತ್ತಿದ್ದಾರೆ ಎಂದು ಹೇಳಿದರು.
ತುರ್ತುಪರಿಸ್ಥಿತಿ ಕಾಲದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಜನರಿಗೆ ಅನ್ನ, ನೀರು, ಬಟ್ಟೆ ಕೊಟ್ಟು ರಕ್ಷಣೆ ಮಾಡಿದ ರೀತಿ, ಈಗಿನ ಬರಗಾಲವನ್ನು ನಿಬಾಯಿಸಲು ಎಲ್ಲ ರೀತಿಯ ಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ ಎಂದರು.
ನನ್ನ 30 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ತವರು ಕ್ಷೇತ್ರವನ್ನು ಅಮೂಲಗ್ರವಾಗಿ ಬದಲಾವಣೆ ಮಾಡಬೇಕು ಎಂಬ ಆಶಯ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ದುಡಿಯುವ ಕೈಗೆಳಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಪ್ರಗತಿಪರ ಕಲ್ಯಾಣ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರಮಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಜನರ ಕಷ್ಟಗಳಿಗೆ ಪರಿಹಾರ ಕೊಡಿಸಲು ತಾಲೂಕು ಆಡಳಿತ ತಮ್ಮ ಮನೆ ಬಾಗಿಲಿಗೆ ಬರುತ್ತಿದ್ದು, ಪ್ರಗತಿಪರ ಜೀವನಕ್ಕೆ ಪೂರಕವಾಗಿದೆ ಎಂದರು.
ಸಾಮಾಜಿಕ ಭದ್ರತೆ ಯೋಜನೆಯಡಿ ಇರುವ ಸವಲತ್ತುಗಳನ್ನ ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುವಲ್ಲಿ ನಿರ್ಲಕ್ಷೃ ವಹಿಸಿದರೆ ಕ್ರಮಖಚಿತ ಎಂದು ಖಡಕ್ ಎಚ್ಚರಿಕೆ ನೀಡಿದರು.
ರಾಂಪುರ ಸುತ್ತಮುತ್ತ ಗ್ರಾಮೀಣರು ಪಿಂಚಣಿ, ವಿಧವೆ ಇತ್ಯಾದಿ ಸೌಲಭ್ಯ ಪಡೆಯಲು ಅರ್ಜಿ ಹಿಡಿದು ಮೊಳಕಾಲ್ಮೂರಿಗೆ ಬರುವ ಅಗತ್ಯ ಇಲ್ಲ. ರಾಂಪುರ ನಾಡಕಚೇರಿಯಲ್ಲೇ ಅರ್ಜಿ ವಿಲೇವಾರಿ ಕೇಂದ್ರ ಲಭ್ಯವಿದೆ ಎಂದರು.
350 ಪಿಂಚಣಿದಾರರಿಗೆ ಆದೇಶ ಪತ್ರ ಕೊಡಲಾಯಿತು. ಗೃಹಲಕ್ಷ್ಮೀ, ಪಿಂಚಣಿ, ಸ್ಮಶಾನ ಹಾಗೂ ಪಡಿತರ ಇತ್ಯಾದಿ 46 ಅರ್ಜಿಗಳು ಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾದವು.
ದೇವಸಮುದ್ರ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಚಂದ್ರಣ್ಣ, ಉಪಾಧ್ಯಕ್ಷ ಜಿ.ಆರ್.ಕುಮಾರಸ್ವಾಮಿ, ಎಡಿಎ ಗಣೇಶ್, ಪಿಡಿಒ ಬಾಂಡ್ರಾವಪ್ಪ, ಅಧಿಕಾರಿಗಳಾದ ಡಾ.ಉಮೇಶ್, ಏಳುಕೋಟಿ, ಡಾ.ರಂಗಪ್ಪ, ಪ್ರಭು, ಮಾಲತಿ, ನವೀನ್, ಮುಖಂಡರಾದ ಪರಮೇಶ್ವರಪ್ಪ, ಆರ್.ಎಂ. ಅಶೋಕ್, ತಿಪ್ಪೇಸ್ವಾಮಿ, ನಾಗರಾಜ್ ಇದ್ದರು.
ಸುಳ್ಳು ಆರೋಪಕ್ಕೆ ಹೆದರುವುದಿಲ್ಲ: ನನ್ನ ನಿಷ್ಠೂರ ಮಾತು ಹೊರಟಾಗಿರುತ್ತದೆ. ನನಗೆ ಜನಸೇವೆಯೇ ಮುಖ್ಯ ಉದ್ದೇಶ. ಈ ವಿಷಯದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ. ನಿರ್ಲಕ್ಷೃ ವಹಿಸುವವರಿಗೆ ಕಠೋರವಾಗಿ ಸೂಚನೆ ಕೊಡುತ್ತೇನೆ. ಇದನ್ನು ಸಹಿಸದ ಕೆಲವರನ್ನು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಅವುಗಳಿಗೆ ನಾನು ಹೆದರುವುದಿಲ್ಲ ಎಂದು ಎನ್.ವೈ.ಗೋಪಾಲಕೃಷ್ಣ ಹೇಳಿದರು.