

ಸಿಂಧನೂರು: ಸಂಘರ್ಷದಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಯುವಜನರಿಗೆ ದಿವ್ಯತ್ರಯರ ಸಂದೇಶಗಳನ್ನು ಹೆಚ್ಚು ತಲುಪಿಸುವ ಅಗತ್ಯವಿದೆ. ಈ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಮಹಾರಾಜ್ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸಾಕಷ್ಟು ನಕಾರಾತ್ಮಕ ಚಿಂತನೆಗಳು ಕಂಡು ಬರುತ್ತಿವೆ. ದಿವ್ಯತ್ರಯರ ಸಂದೇಶಗಳಾದ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದ ಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಿದ್ಧಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂಧನೂರಿನ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಮಾತನಾಡಿ, ಮನುಷ್ಯನಲ್ಲಿ ಆತ್ಮಶಕ್ತಿ ಜಾಗೃತವಾಗುವಲ್ಲಿ ವಿವೇಕಾನಂದರ ಚಿಂತನೆ ಅವಶ್ಯ. ದಿವ್ಯತ್ರಯ ಚಿಂತನೆ, ಸಂದೇಶಗಳಿಂದ ಮಾತ್ರ ಭಾರತ ಉದ್ಧಾರ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ನೇತ್ರ ತಜ್ಞ ಡಾ.ಚನ್ನನಗೌಡ ಆರ್.ಪಾಟೀಲ್, ಆಶ್ರಮ ಸ್ಥಳದ ಭೂದಾನಿ ರಾಜಶೇಖರ ರೆಡ್ಡಿ ಮಾತನಾಡಿದರು.