

ಸುಂಟಿಕೊಪ್ಪ: ಯಾವುದೇ ಒಂದು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಲು ಕ್ರೀಡಾಕೂಟ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಇಲ್ಲಿನ ಗದ್ದೆಹಳ್ಳದ ವೈಎಂ.ಕರುಂಬಯ್ಯ ಅವರ ಗದ್ದೆಯಲ್ಲಿ ಪಥಮ ಬಾರಿಗೆ ಅಯೋಜಿಸಿರುವ ಗದ್ದೆಹಳ್ಳದಲ್ಲಿ ಗದ್ದೆಆಟ ಮಳೆಗಾಲದ ಹಬ್ಬ-2025ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಭತ್ತದ ಬೇಸಾಯ ಹಿನ್ನಡೆ ಕಂಡಿರುವ ಈ ದಿನಗಳಲ್ಲಿ ಹಿರಿಯರಾದ ವೈ.ಎಂ.ಕರುಂಬಯ್ಯ ಅವರು ಯುವಜನತೆ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏಕತೆ, ಪದ್ಧತಿ-ಪರಂಪರೆ ಹಾಗೂ ಸಮಾಜದ ಒಗ್ಗಟ್ಟು ಕಾಪಾಡಿಕೊಳ್ಳುವ ಧೇಯ ವಾಕ್ಯದೊಂದಿಗೆ ಈ ಕ್ರೀಡಾ ಆಯೋಜಿಸಿದು ಸಮಯೋಚಿತ ಮಹತ್ವ ಪೂರ್ಣವಾಗಿದೆ ಎಂದು ಪ್ರಶಂಸಿದರು.
ಕೆಸರುಗದ್ದೆ ಕ್ರೀಡಾಕೂಟ ಯಾವುದೇ ಪೂರ್ವ ಸಿದ್ಧತೆಗಳು ಇಲ್ಲದೆ ಪಾಲ್ಗೊಳ್ಳುವ, ಸಂತಸಪಡುವ ಕ್ರೀಡಾಕೂಟವಾಗಿದೆ. ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮುತ್ತದೆ ಎಂದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಸರುಗದ್ದೆ ಕ್ರೀಡಾಕೂಟ ಎಂಬುದು ಪ್ರಾಕೃತಿಕ ಮಣ್ಣು ಚಿಕಿತ್ಸೆಯಾಗಿದ್ದು, ನಮ್ಮ ಹಿರಿಯರು ಆಯಾ ಕಾಲಘಟ್ಟದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಾಪಾಡಿಕೊಳ್ಳಲು ಅತ್ಯುತ್ತಮ ಚಿಕಿತ್ಸಾ ಕ್ರಮಗಳನ್ನು ಕಂಡುಕೊಂಡಿದ್ದರು. ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗದ ನಡುವೆ ವಿವಿಧತೆಯಲ್ಲಿ ಏಕತೆ ತರಲು ಕ್ರೀಡಾಕೂಟ ಪ್ರಬಲ ಸಾಧನ ಎಂದು ಅಪ್ಪಚ್ಚು ರಂಜನ್ ಬಣ್ಣಿಸಿದರು.
ಹಿರಿಯರಾದ ವೈ.ಎಂ.ಕರುಂಬಯ್ಯ ನಮಗೆಲ್ಲರಿಗೂ ಮಾರ್ಗದರ್ಶಕರು, ಗುರು ಸಮಾನರು. ಗದ್ದೆಹಳ್ಳದಲ್ಲಿ ಗದ್ದೆಆಟ ನಿರಂತರವಾಗಿ ನಡೆಯಲು ನಾವೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಇದೇ ಪರಿಸರದಿಂದ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿ ಪಟ್ಟೆಮನೆ ನವನೀತ ಉದಯಕುಮಾರ್ ಹೊರಮ್ಮಿದ್ದನ್ನು ಅಪ್ಪಚ್ಚು ರಂಜನ್ ಸ್ಮರಿಸಿದರಲ್ಲದೆ, ಇಂಥ ಕ್ರೀಡೆಗಳು ಕ್ರೀಡಾ ಪ್ರತಿಭೆಗಳು ಹೊರ ಬರಲು ಮುನ್ನುಡಿ ಬರೆಯಲಿ ಎಂದು ಆಶಿಸಿದರು.
ಆಯೋಜಕರಾದ ನಿಡ್ಯಮನೆ ತೃಶಲ್ ಸನ್ಮಾನ್, ಪಟ್ಟೆಮನೆ ಹರ್ಷ,ಬೈಮನೆ ಚರಣ್, ಪಟ್ಟೆಮನೆ ಚರಣ್, ಮೀನಾ ಚೇತನ್, ಪಟ್ಟೆಮನೆ ಹರ್ಷ, ಗಹನ ಪಾರ್ಥ, ಪವಿತ್ರಾ ದಿವಾಕರ್, ಆರ್.ರಮೇಶ್ ಪಿಳ್ಳೆ, ಭಾರ್ಗವ, ಎ.ಬಿ.ಪಾರ್ಥ, ಎನ್.ಎಂ.ಸುಮನಾ, ತೀರ್ಪುಗಾರರಾದ ಚಂದ್ರಶೇಖರ್ ಪೂಜಾರಿ, ಮಂಜು, ಕುಸುಮಾ, ಮೋಹನ (ಮಹೇಂದ್ರ), ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯೆ ಮಂಜುಳಾ(ರಾಸಥಿ), ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತಾ ಇದ್ದರು.
ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 8 ಪುರುಷರ ವಿಭಾಗದಲ್ಲಿ ಟೀಂ ಕಾರ್ಗಿಲ್ ಪ್ರಥಮ ಹಾಗೂ ಗದ್ದೆಹಳ್ಳದ ಟೀಂ ಡಾಲ್ಫಿನ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ 4 ತಂಡಗಳು ಭಾಗವಹಿಸಿದ್ದು, ಗದ್ದೆಹಳ್ಳ ಮಹಿಳೆಯರು ಪ್ರಥವ ಹಾಗೂ ದ್ವಿತೀಯ ಸ್ಥಾನವನ್ನು ಬಾಳೆಕಾಡು ತಂಡದವರು ಪಡೆದುಕೊಂಡರು.
ಓಟದ ಸ್ಪರ್ಧೆ, ರಿಲೇ ಓಟ, ಹಗ್ಗ-ಜಗ್ಗಾಟ, ಫನ್‌ಗೇಮ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿದ ಸ್ಪರ್ಧಿಗಳು ಮತ್ತು ತಂಡದವರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.