ಸೌಹಾರ್ದ ಸಮಾಜ ನಿರ್ಮಾಣ ಎಲ್ಲರ ಕರ್ತವ್ಯ

ಚಿತ್ರ 10ಎಸ್ ಡಿ ಪಿ 10
ಕಂಡಕರೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು.
Published on

ಸಿದ್ದಾಪುರ : ಸೌಹಾರ್ದ ಸಮಾಜ ನಿರ್ಮಾಣ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಜಾಮಿ ಅಭಿಪ್ರಾಯಪಟ್ಟರು.

ಕಂಡಕರೆಯಲ್ಲಿ ಗಾಂಧಿ ಯುವಕ ಸಂಘ, ಸರ್ವಧರ್ಮೀಯ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭಾರತ ಎಲ್ಲ, ಜಾತಿ, ಧರ್ಮಗಳನ್ನೊಳಗೊಂಡ ದೇಶವಾಗಿದೆ. ಸಮಾಜದಲ್ಲಿ ಸೌಹಾರ್ದ ಸ್ಥಾಪಿಸಲು ಎಲ್ಲರೂ ಶ್ರಮಿಸಬೇಕಾಗಿದೆ. ಸೌಹಾರ್ದ ನಮ್ಮ ಉದ್ದೇಶ, ನಮ್ಮ ಸಂದೇಶ ಎಂಬ ಧ್ಯೇಯವಾಕ್ಯದೊಂದಿಗೆ ಗಾಂಧಿ ಯುವಕ ಸಂಘವು ಸರ್ವ ಧರ್ಮೀಯ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೈಯಕ್ತಿಕವಾಗಿ ನಾನು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ವಿರೋಧಿಸುವವನು. ಆದರೆ ಗಾಂಧಿ ಯುವಕ ಸಂಘವು ಬಡ, ಅನಾಥ ಹೆಣ್ಣು ಮಕ್ಕಳನ್ನು ಗುರುತಿಸಿ, ಅರ್ಹರಿಗೆ ಸಹಾಯ ಮಾಡುವ ಮೂಲಕ ಎಲ್ಲರಿಗೂ ಮಾರ್ಗದರ್ಶನವಾಗಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ಗಾಂಧಿ ಯುವಕ ಸಂಘದ ಯುವಕರು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಂಘ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮ ಆಯೋಜಿಸಿದ್ದು ಕೊಡಗಿನ ಯುವ ಜನರಿಗೆ ಮಾದರಿಯಾಗಿದೆ. ಈ ಸಂಘದ ಮುಂದಿನ ದಿನಗಳಲ್ಲಿ ಮಾಡುವ ಕಾರ್ಯಕ್ರಮಗಳಿಗೆ ನನ್ನ ಸಹಕಾರ, ಬೆಂಬಲ ಇರಲಿದೆ ಭರವಸೆ ನೀಡಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ ಒಂದು ಜೋಡಿಗೆ ಸಂಘದಿಂದ 40 ಗ್ರಾಂ ಚಿನ್ನ ಹಾಗೂ ವಧುವಿಗೆ ಮದುವೆ ಬಟ್ಟೆಯನ್ನು ನೀಡಲಾಯಿತು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಹಿಂದು ಮಲಯಾಳಿ ಸಮಾಜದ ಸಲಹೆಗಾರ ಹಾಗೂ ಎಸ್‌ಎನ್‌ಡಿಪಿ ಮಡಿಕೇರಿ ಶಾಖಾ ಅಧ್ಯಕ್ಷ ಟಿ.ಆರ್ ವಾಸುದೇವ್, ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟ್ಟಿಕೊಪ್ಪ, ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಕಟದ ಅಧ್ಯಕ್ಷ ಜಾಸೀರ್ ಮೂರ್ನಾಡು, ಕೊಡಗು ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಅಡ್ಕರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ.ತೀರ್ಥಕುಮಾರ್, ಎಸ್‌ಎಸ್‌ಎಫ್ ಕಂಡಕರೆ ಯೂನಿಟ್ ಅಧ್ಯಕ್ಷ ಬಿ.ಎಂ ಇಬ್ರಾಹಿಂ, ಬಿಜೆಪಿ ಬೂತ್ ಅಧ್ಯಕ್ಷ ಜಗನ್ ನೂಜಿಬೈಲು, ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಸಿ.ಕೆ. ಶಂಸುದ್ದೀನ್, ಆಬಿದ್ ಕಂಡಕರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net