

ಹುಬ್ಬಳ್ಳಿ : ತಂದೆ, ತಾಯಿ ಕಲಿಸುವ ಸಂಸ್ಕಾರ, ಗುರು ಹಿರಿಯರು ಕಲಿಸುವ ವಿದ್ಯೆ, ಸಮಾಜ ಕಲಿಸುವ ಬದುಕುವ ಕಲೆ, ಎಲ್ಲವೂ ಉತ್ತಮವಾಗಿಯೇ ಇರುತ್ತವೆ. ಇವನ್ನೆಲ್ಲ ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಬಸವರಾಜ ಕುಂದಗೋಳಮಠ ಹೇಳಿದರು.
ನಗರದ ಕನಕದಾಸ ಶಿಕ್ಷಣ ಸಮಿತಿಯ ಡಾ. ಬಿ.ಎಫ್. ದಂಡಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದೇಶ್ವರ ಸ್ವಾಮಿಗಳ ತತ್ವಾದರ್ಶಗಳನ್ನು ಯುವ ವಿದ್ಯಾರ್ಥಿಗಳು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಾಲತೇಶ ಶ್ಯಾಗೋಟಿ ಮಾತನಾಡಿ, ವಿದ್ಯಾರ್ಥಿಗಳು ತಂದೆ, ತಾಯಿ ಜತೆಗೆ ಗೌರವದಿಂದ ನಡೆದುಕೊಳ್ಳಿ ಮತ್ತು ಉತ್ತಮ ಪ್ರತಿಭೆ ಬೆಳಸಿಕೊಳ್ಳಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಆಹಾರ ನಿಗಮದ ಸದಸ್ಯ ರವೀಂದ್ರನಾಥ ದಂಡಿನ ಮಾತನಾಡಿದರು. ಭಾರತೀಯ ಸೇನೆಯಲ್ಲಿ ಅಗ್ನಿವೀರ ಸೈನಿಕನಾಗಿರುವ ಕಾಲೇಜಿನ ವಿದ್ಯಾರ್ಥಿ ಮನೋಜ ಮಂಟಗನಿ ಅವರನ್ನು ಸನ್ಮಾನಿಸಲಾಯಿತು.
ಪದವಿ ಪ್ರಾಚಾರ್ಯ ಡಾ. ಬಸವರಾಜ ಮಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬೀರೇಶ ತಿರಕಪ್ಪನವರ ಸ್ವಾಗತಿಸಿದರು. ಡಾ. ಸವಿತಾ ಸಿದ್ದುನವರ ನಿರೂಪಿಸಿದರು. ಪ್ರೊ. ಗಾಯತ್ರಿ ಹೊಸಮನಿ ವಂದಿಸಿದರು. ಎಂ.ಕಾಂ ಪ್ರಾಚಾರ್ಯ ಶರಣು ಅಣ್ಣಿಗೇರಿ, ವಿದ್ಯಾರ್ಥಿ ಪ್ರಮುಖ ಪ್ರವೀಣ ವೆಂಕಟಾಪುರ ಹಾಗೂ ಇತರರು ಉಪಸ್ಥಿತರಿದ್ದರು.