ಸ್ವಚ್ಛ-ಸ್ವಸ್ಥ ಸಮಾಜ ನಿರ್ಮಾಣವೇ ನಮ್ಮ ಧ್ಯೇಯ; ಸಿಇಒ ರಿಷಿ ಆನಂದ

CEO RISHI ANANDA MEETING SHOUCHAGRUHA
ವಿಜಯಪುರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಪಂ ಸಿಇಒ ರಿಷಿ ಆನಂದ ಅಧಿಕಾರಿಗಳ ಸಭೆ ನಡೆಸಿದರು. ಬಿ.ಎಸ್. ರಾಠೋಡ, ಕೆ.ಕೆ. ಚವಾಣ್, ಸಂಪತ್ ಗುಣಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣವೇ ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ, ಶೌಚಗೃಹ ವಿಶ್ವ ದಿನಾಚರಣೆ ಅಂಗವಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ರಿಷಿ ಆನಂದ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಶೌಚಗೃಹ ವಿಶ್ವ ದಿನಾಚರಣೆ ಅಂಗವಾಗಿ ‘ಅಂದದ ಶೌಚಾಲಯ-ಆನಂದದ ಜೀವನ’ ಎಂಬ ಘೋಷವಾಕ್ಯದೊಂದಿಗೆ ನ.19ರಿಂದ ಡಿ.10ರವರೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಆಂದೋಲನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದೆ ಎಂದ ಸಿಇಒ, ಅಂಗನವಾಡಿಗಳಲ್ಲಿ ಶೌಚಗೃಹದ ಪ್ರಸ್ತುತ ವ್ಯವಸ್ಥೆ ಹಾಗೂ ಪರಿಸರ ಸ್ನೇಹಿ ಶೌಚಗೃಹಗಳ ನಿರ್ಮಾಣ, ಅಂಗನವಾಡಿ, ಶಾಲೆ-ಕಾಲೇಜುಗಳ ಸುತ್ತಮುತ್ತಲೂ 5 ಮೀಟರ್ ದೂರದವರೆಗೆ ಸ್ವಚ್ಛತೆಯನ್ನು ಕಾಪಾಡುವುದು ಸೇರಿದಂತೆ ಎಲ್ಲ ಕಚೇರಿಗಳಲ್ಲಿಯೂ ಪ್ರತಿದಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.

ನಗರ ಮತ್ತು ಗ್ರಾಮೀಣ ಭಾಗದ ಸ್ವಚ್ಚತೆಗೆ ಬದ್ಧರಾಗೋಣ. ನಮ್ಮ ಕಚೇರಿಯ ಒಳ ಹಾಗೂ ಹೊರ ಆವರಣಗಳನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಇದ್ದರೆ ಮಾತ್ರ ನಾವು ಆರೋಗ್ಯವಂತರಾಗಿ ಇರಲು ಸಾಧ್ಯ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.

ಶೌಚಗೃಹ ಇಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ಸಹಾಯಧನದಿಂದ ಶೌಚಗೃಹ ಕಟ್ಟಿಸಿ. ನಿಮ್ಮ ಮನೆಯ ಸುತ್ತ-ಮುತ್ತ ನೈರ್ಮಲ್ಯ ಇಟ್ಟುಕೊಳ್ಳಬೇಕು. ಮಲೇರಿಯಾ, ಡೆಂೆ ಹಾಗೂ ಇತರೆ ಆರೋಗ್ಯದ ಸಮಸ್ಯೆ ಆಗದಂತೆ ಎಚ್ಚರವಹಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸೋಣ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಾಲೆ-ಕಾಲೇಜುಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು, ಶೌಚಗೃಹಗಳಿಗೆ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿದ್ದರೆ ತುರ್ತಾಗಿ ದುರಸ್ತಿ ಮಾಡಬೇಕು. ಹೊಸದಾಗಿ ಶೌಚಗೃಹ ನಿರ್ಮಾಣ ಮಾಡಬೇಕಾದಲ್ಲಿ ಅನುಮೋದನೆಗಾಗಿ ಕ್ರಿಯಾಯೋಜನೆ ಸಲ್ಲಿಸಿ ಕೂಡಲೇ ಹೊಸ ಶೌಚ ಗೃಹಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸ್ತುತ ಸ್ಥತಿಯಲ್ಲಿರುವ ಶೌಚಗೃಹಗಳ ಕುರಿತು ಮಾಹಿತಿ ಪಡೆದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

ಜಿಪಂ ಯೋಜನಾ ನಿರ್ದೇಶಕ(ಡಿಆರ್‌ಡಿಎ ಕೋಶ) ಬಿ.ಎಸ್. ರಾಠೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಕೆ. ಚವಾಣ್, ಡಿಎಚ್‌ಒ ಸಂಪತ್ ಗುಣಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಸಣ್ಣ ನೀರಾವರಿ ಇಲಾಖೆಯ ಕಿರಿಯ ಅಭಿಯಂತರ ಎಸ್.ಎಂ. ದೇಸಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net