

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ದಂಡ ಸಂಹಿತೆ 1860ರಲ್ಲಿ ಲಾರ್ಡ್ ಮೆಕಾಲೆ ಅವಧಿಯಲ್ಲಿ ರಚಿತ ಕಾನೂನುಗಳು ಕೆಲ ದಿನಗಳಲ್ಲಿ ವಿದಾಯ ಕಾಣಲಿವೆ. ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2024 ಜು. 1ರಂದು ಕೆಲ ಬದಲಾವಣೆಯೊಂದಿಗೆ ಜಾರಿಗೆ ಬರಲಿದೆ ಎಂದು ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಸಂಜುಗೌಡ ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಪರಾಧ ತಡೆಗಟ್ಟುವಿಕೆಯಲ್ಲಿ ಕಾನೂನು ಕ್ರಮ ಮತ್ತು ನಾಗರಿಕರ ಸಾಮಾಜಿಕ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು.
ಹೊಸದಾಗಿ ಜಾರಿಗೆ ಬರುವ ಭಾರತೀಯ ನ್ಯಾಯ ಸಂಹಿತೆ ಕೆಲ ಕಲಂಗಳು ಗಂಭೀರವಾಗಿ ಮಾರ್ಪಾಡಾಗಿವೆ. ಅಪರಾಧಕ್ಕೆ ದಂಡ ಮತ್ತು ಶಿಕ್ಷೆ ಪ್ರಮಾಣ ವಿಧಿಸುವಲ್ಲಿ ನ್ಯಾಯಾಂಗಗಳ ನ್ಯಾಯದಾನ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಜನರು ಹೊಸ ಕಾನೂನುಗಳ ಕುರಿತು ಜಾಗೃತಿ ವಹಿಸಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬಸವಪ್ರಭು ಹೊಸಕೇರಿ ಮಾತನಾಡಿ, ಜಪಾನ್ ದೇಶದಲ್ಲಿ ಶಾಲೆಗಳಲ್ಲಿ ಶೌಚಗೃಹಗಳನ್ನು ಮಕ್ಕಳು ಸ್ವಚ್ಚಗೊಳಿಸುವುದು ಅಪರಾಧವಲ್ಲ. ಆದರೆ ಭಾರತದಲ್ಲಿ ಅದು ಅಪರಾಧ ಎಂದಾದರೆ ನಾಗರಿಕರು ಇದರ ಬಗ್ಗೆ ಸೂಕ್ತ ಚಿಂತನೆ ಮಾಡುವುದು ಅಗತ್ಯ. ಬರುವ ದಿನಗಳಲ್ಲಿ ಯುವಕರಿಗೆ ಸಂದಿಂದ ಇಂತಹ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವಿಶ್ವೇಶ್ವರಿ ಹಿರೇಮಠ, ವೀಣಾ ಚಿಕ್ಕಮಠ, ಶಿವಾನಂದ ಭಾವಿಕಟ್ಟಿ, ಎಸ್.ಎಚ್. ಪೂಜಾರ, ಅಶೋಕ ಏಣಗಿ, ಮಂಗಳಗೌರಿ ಹಿರೇಮಠ, ಅಭಿಷೇಕ ದೇಸಾಯಿ, ಮಹಾಂತೇಶ ನರೇಗಲ್, ಪಿ.ಎಸ್.ದಿಂಡಲಕೊಪ್ಪ, ಶಿರಹಟ್ಟಿ, ಎಸ್.ಕೆ. ಕುಂದರಗಿ, ಅಶೋಕ ಕೋರಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾವತಿ ದೇಸಾಯಿ ನಿರೂಪಿಸಿದರು. ಪ್ರೊ. ಎನ್.ಆರ್. ಬಾಳಿಕಾಯಿ ವಂದಿಸಿದರು.