

ಹರೀಶ್ ಬೇಲೂರು ಬೆಂಗಳೂರು
ವಸತಿ ಇಲಾಖೆ ಅಧೀನದ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ (ರೇರಾ)ಕಾಯ್ದೆಗೆ ಬಿಲ್ಡರ್ಗಳು ಕಿಮ್ಮತ್ತು ಕೊಡುತ್ತಿಲ್ಲ.
2024ರ ಡಿಸೆಂಬರ್ ಅಂತ್ಯಕ್ಕೆ ರಾಜ್ಯಾದ್ಯಂತ 1,660 ಕೇಸ್ಗಳ ಪೈಕಿ 103 ಕೇಸ್ಗಳು ಲೋಕ್ ಅದಾಲತ್ನಲ್ಲಿ ರಾಜಿ ಮೂಲಕ ಇತ್ಯರ್ಥವಾಗಿದ್ದು, 54 ಕೋಟಿ ರೂ.ಗಳನ್ನು ಬಿಲ್ಡರ್ಗಳಿಂದ ವಸೂಲಿ ಮಾಡಲಾಗಿದೆ. ಆಯಾ ಜಿಲ್ಲೆಯ ಡಿಸಿಗಳು 130 ಪ್ರಕರಣಗಳಲ್ಲಿ 37 ಕೋಟಿ ರೂ. ಕಟ್ಟಿಸಿಕೊಂಡಿದ್ದಾರೆ. ಒಟ್ಟು 233 ಕೇಸ್ಗಳಿಂದ 91.88 ಕೋಟಿ ರೂ.ವಸೂಲಿ ಮಾಡಲಾಗಿದೆ. ಆದರೆ, ಇನ್ನೂ 1,427 ಕೇಸ್ಗಳಿಂದ ಒಟ್ಟು 666 ಕೋಟಿ ರೂ. ದಂಡವನ್ನು ಬಿಲ್ಡರ್ಗಳು ಕಟ್ಟಬೇಕಿದೆ. ಹಲವು ಬಾರಿ ಪ್ರಾಧಿಕಾರವೂ ಸೂಚನೆ ನೀಡಿದ್ದರೂ ದಂಡ ಪಾವತಿಗೆ ಬಿಲ್ಡರ್ಗಳು ಮುಂದೆ ಬರುತ್ತಿಲ್ಲ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಉತ್ತೇಜಿಸಲು, ಖರೀದಿದಾರರನ್ನು ರಸಲು ಮತ್ತು ನಕಲಿ ಲೇಔಟ್ ಹಾವಳಿ ತಡೆಗೆ ಕೇಂದ್ರ ಸರ್ಕಾರ, 2016ರಿಂದ ರೇರಾ ಕಾಯ್ದೆ ಜಾರಿಗೆ ತಂದಿದೆ. ಅದರಂತೆ, 2017ರ ಜು.11ರಿಂದ ರಾಜ್ಯದಲ್ಲಿಯೂ ಇದು ಅನುಷ್ಠಾನಕ್ಕೆ ಬಂದಿದೆ. ಕಾಯ್ದೆ ಮತ್ತು ನಿಯಮ ಉಲ್ಲಂಘಿಸುವ ಪ್ರತಿ ಬಿಲ್ಡರ್ಗೆ ಕೇಸ್ ದಾಖಲಿಸಿ ದಂಡ ವಿಧಿಸಲು ಪ್ರಾಧಿಕಾರಕ್ಕೆ ಅಧಿಕಾರ ಇದೆ. ದಂಡದ ಮೊತ್ತವನ್ನು ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ಸರ್ಕಾರ ಈಗಾಗಲೇ ಕಾರ್ಯಗತ ಆದೇಶವನ್ನೂ ಹೊರಡಿಸಿದೆ.
ಬಾಕಿ ಮೊತ್ತವನ್ನು ವಸೂಲಿಗೆ ಅಧಿಕಾರ ಹೊಂದಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ರೆವಿನ್ಯೂ ರಿಕವರಿ ಸರ್ಟಿಫಿಕೇಟ್ ಕಳುಹಿಸಲಾಗತ್ತಿದೆ. ಅದರಂತೆ, ವಸೂಲಿ ಮಾಡಿದ ಮೊತ್ತವನ್ನು ಡಿಸಿ, ರೇರಾಗೆ ಜಮೆ ಮಾಡುತ್ತಿದ್ದಾರೆ. 2024ರ ಡಿ.31ಕ್ಕೆ ಒಟ್ಟು 1,660 ಕೇಸ್ಗಳಲ್ಲಿ 758 ಕೋಟಿ ರೂ.ಮೊತ್ತವನ್ನು ಭೂ ಕಂದಾಯ ಬಾಕಿ ಎಂದು 278 ಬಿಲ್ಡರ್ಗಳಿಗೆ ವಸೂಲಾತಿ ಆದೇಶ ನೀಡಲಾಗಿದೆ. ಸಂಪೂರ್ಣವಾಗಿ ದಂಡದ ಮೊತ್ತ ವಸೂಲಾತಿಗೆ ಕಂದಾಯ ಮತ್ತು ಆರ್ಥಿಕ ಇಲಾಖೆಯೊಡನೆ ಸಮಾಲೋಚನೆ ಸಭೆ ನಡೆಸಿ ಪ್ರತ್ಯೇಕ ವಿಶೇಷ ಕೋಶ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ.
ಅನುಮತಿಗಿಂತ ಹೆಚ್ಚು ನಿರ್ಮಾಣ
ರಾಜ್ಯದಲ್ಲಿರುವ ವಸತಿ ಬಡಾವಣೆಗಳ ಪೈಕಿ ಶೇ.90 ಲೇಔಟ್ಗಳು ವ್ಯಕ್ತಿಗಳ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿದೆ. ಉಳಿದ ಶೇ.10 ಸಂ ಸಂಸ್ಥೆಗಳ ಹೆಸರಿನಲ್ಲಿವೆ. ಕೆಲ ಲೇಔಟ್ಗಳಿಗೆ ಆರಂಭದಲ್ಲಿ ನಿಗದಿಪಡಿಸಿದ ಭೂಮಿಗಷ್ಟೇ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿರುತ್ತದೆ. ನಂತರ, ಅದರ ವ್ಯಾಪ್ತಿಯನ್ನು ಅಕ್ರಮವಾಗಿ ವಿಸ್ತರಿಸಲಾಗುತ್ತದೆ. ಅನಧಿಕೃತ ಬಡಾವಣೆ ನಿಯಂತ್ರಿಸಲು ಎಲ್ಲ ನಗರ ಸ್ಥಳಿಯ ಸಂಸ್ಥೆಗಳಿಗೆ ಸರ್ಕಾರ, ನಿರ್ದೇಶನ ನೀಡಿದ್ದರೂ ಪರಿಣಾಮಕಾರಿಯಾಗಿ ಕಾರ್ಯ ರೂಪಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಅನಧಿಕೃತ ಲೇಔಟ್ ಬೆಂಗಳೂರು ಮತ್ತು ಮೈಸೂರಿನಲ್ಲಿವೆ.
ನಿಯಮ ಉಲ್ಲಂಘನೆ ಹೇಗೆ?
* ಬಿಲ್ಡರ್ಗಳು ಬಡಾವಣೆ ನಿರ್ಮಾಣ ಪೂರ್ವದಲ್ಲಿ ಪಾಲಿಸಬೇಕಾದ ನಿಯಮ ಅನುಸರಿಸುತ್ತಿಲ್ಲ
* ಲೇಔಟ್ ನಿರ್ಮಾಣ ಮುನ್ನ ಡಿಸಿಗಳಿಂದ ಭೂ ಪರಿವರ್ತನೆ ಅನುಮತಿ ಪಡೆಯದಿರುವುದು
* ಸ್ಥಳಿಯ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ನೆ ಪಡೆಯದಿರುವುದು
* ಬಡಾವಣೆ ಅಭಿವೃದ್ಧಿಪಡಿಸುವ ವೇಳೆ ಶೇ.55 ವಸತಿ ಉದ್ದೇಶಕ್ಕೆ, ಶೇ.10 ಉದ್ಯಾನಕ್ಕೆ ಉಳಿದ ಪ್ರದೇಶವನ್ನು ನಾಗರಿಕ ಸೌಲಭ್ಯ, ರಸ್ತೆ ನಿರ್ಮಾಣಕ್ಕೆ ಜಾಗ ಮೀಸಲಿಡದಿರುವುದು
* ನಿಗದಿತ ಸಮಯದಲ್ಲಿ ಪ್ರಾಜೆಕ್ಟ್ ಪೂರ್ತಿ ಮಾಡದಿರುವುದು
* ನಿಗದಿತ ಸಮಯ ಮುಗಿದರೂ ಪ್ರಾಜೆಕ್ಟ್ ಪೂರ್ತಿಗೆ ಕಾಲಾವಕಾಶ ಕೇಳದಿರುವುದು
* ನಿಯಮ ಉಲ್ಲಂಘಿಸಿದರೆ ಒಟ್ಟು ಪ್ರಾಜೆಕ್ಟ್ ಮೌಲ್ಯದಲ್ಲಿ ಶೇ.5ವರೆಗೆ ದಂಡ ಹಾಕುವ ಅವಕಾಶ
* ರೇರಾದಲ್ಲಿ ಪ್ರಾಜೆಕ್ಟ್ ನೋಂದಾಯಿಸದೆ ನಿವೇಶನಗಳ ಮಾರಾಟ
* ಅನುಮತಿಗಿಂತ ಹೆಚ್ಚು ಜಾಗದಲ್ಲಿ ಲೇಔಟ್ ವಿಸ್ತರಣೆ
* ಸೂಕ್ತ ಮೂಲಸೌಕರ್ಯ ಒದಗಿಸದಿರುವುದು
ದಂಡ ವಸೂಲಿ ವಿಚಾರದಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಹಲ್ಲು ಕಿತ್ತ ಹಾವಿನಂತಾಗಿದೆ. ಪ್ರಾಧಿಕಾರ ಮತ್ತು ಡಿಸಿ ನಡುವೆ ಸಮನ್ವಯತೆ ಇಲ್ಲ. ಕೆಲ ಕಾರಣಗಳಿಂದಲೂ ಸಂಪೂರ್ಣವಾಗಿ ದಂಡ ಮೊತ್ತ ವಸೂಲಾತಿಗೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
| ಪ್ರಶಾಂತ್ ಮಿರ್ಲೆ, ಸುಪ್ರಿಂಕೋರ್ಟ್ ವಕೀಲ.