ಸಮ-ಸಮಾಜದ ನಿರ್ಮಾತೃ

10 HANUR 2
ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಬಸವ ಜಯಂತಿಯನ್ನು ಅಚರಿಸಲಾಯಿತು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎ.ಈ ರಘು, ಮಲ್ಲಿಕಾರ್ಜುನ, ಮಹದೇವಸ್ವಾಮಿ, ಪುಟ್ಟಪ್ಪ ಇತರರು ಇದ್ದರು.
Published on

ಹನೂರು: ಸಮಾಜದಲ್ಲಿ ಲಿಂಗ ಅಸಮಾನತೆ, ಜಾತಿ, ಧರ್ಮದ ವಿರುದ್ಧ ಹೋರಾಡಿದ ಬಸವಣ್ಣನ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.


ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಶುಕ್ರವಾರ ಆಯೋಜಿಸಿದ್ಧ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.


12ನೇ ಶತಮಾನವು ಸಮಾಜ ಸುಧಾರಕರ ಯುಗ. ಈ ಕಾಲ ಘಟ್ಟದಲ್ಲಿ ಅಸಮಾನತೆ ತಾಂಡವಾಡುತ್ತಿತ್ತು. ಈ ವೇಳೆ ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ಮಹಾನ್ ಕವಿಯಾದ ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಪಸರಿಸಲು ಆರಂಭಿಸಿದರು. ಕಾಯಕದ ಮಹತ್ವ ತಿಳಿಸಿದವರು. ಬಿಜ್ಜಳನ ಮಂತ್ರಿಯಾಗಿದ್ದ ಇವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಇದು ಎಲ್ಲ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಗಿದ್ದು, ಅಂದಿನ ಕಾಲದಲ್ಲೇ ಸಂಸತ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದರಿಂದ ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದು ಹಾಕಲು ಸಾಧ್ಯವಾಯಿತು. ಹಾಗಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ನೀಡಿರುವ ಕೊಡುಗೆಗಳು ಇಂದಿಗೂ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಇವರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.


ನಿವೃತ್ತಿ ಸನ್ಮಾನ: ಇದೇ ವೇಳೆ ಪ್ರಾಧಿಕಾರದಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಸಹಾಯಕ ಪಾರುಪತ್ತೆದಾರ ಪಿ.ಪುಟ್ಟಪ್ಪ ಅವರನ್ನು ಪ್ರಾಧಿಕಾರದಿಂದ ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ದಾಸೋಹ ಭವನದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಮವಸ್ತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಪಾರುಪತ್ತೇದಾರ ಮಲ್ಲಿಕರ್ಜುನ, ನೌಕರರಾದ ಸರಗೂರು ಮಹದೇವಸ್ವಾಮಿ, ಸ್ವಾಮಿ, ಶಾಸ್ತ್ರಿ, ಮಹದೇವಸ್ವಾಮಿ, ಜನಾರ್ಧನ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net