ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಶೌಚಗೃಹ ನಿರ್ಮಿಸಿ

21 HANUR 4
ಮಲೆಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎಂ.ಆರ್ ಮಂಜುನಾಥ್, ಎ.ಆರ್ ಕೃಷ್ಣಮೂರ್ತಿ, ಸಿ.ಟಿ ಶಿಲ್ಪಾನಾಗ್, ಡಾ. ಬಿ.ಟಿ ಕವಿತಾ, ಎ.ಈ. ರಘು ಇತರರು ಇದ್ದರು.
Published on

ಹನೂರು: ತಾಳುಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ಮಾರ್ಗಮಧ್ಯೆ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರಿಗೆ ಶೌಚಗೃಹ ನಿರ್ಮಾಣವಾಗುವ ಕೆಲಸವಾಗಬೇಕು ಎಂದು ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ ನೀಡಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಮ.ಬೆಟ್ಟಕ್ಕೆ ಮಹಾಶಿವರಾತ್ರಿ, ದೀಪಾವಳಿ ಹಾಗೂ ಇನ್ನಿತರ ಜಾತ್ರೆ ವೇಳೆ ಹೆಚ್ಚಿನ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸುತ್ತಾರೆ. ತಾಳುಬೆಟ್ಟದಲ್ಲಿ ಶೌಚಗೃಹ ವ್ಯವಸ್ಥೆ ಇದೆ. ಆದರೆ ಮ.ಬೆಟ್ಟದವರೆಗೆ ಶೌಚಗೃಹವಿಲ್ಲ. ಇದರಿಂದ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸಿ ಅಗತ್ಯ ಸ್ಥಳದಲ್ಲಿ ಶೌಚಗೃಹ ನಿರ್ಮಿಸಬೇಕು. ಮ.ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿಸಲು ಇನ್ನಷ್ಟು ಕಠಿಣ ಕ್ರಮಕೈಗೊಳ್ಳಬೇಕು. ಹಾಗೆಯೇ ತಾಳುಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸುವುದರ ಮೂಲಕ ತಪಾಸಣೆ ನಡೆಸಬೇಕು. ಮ.ಬೆಟ್ಟದಲ್ಲಿ ಮತ್ತೊಂದು ಹೆಲಿಪ್ಯಾಡ್ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಬಗ್ಗೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದೇ ವೇಳೆ ದೀಪದಗಿರಿ ಒಡ್ಡುವಿನಲ್ಲಿರುವ 15 ಮನೆಗಳ ಸ್ಥಳಾಂತರಿಸುವ ಸಂಬಂಧ ಸಭೆ ನಡೆಸಿ ಅಲ್ಲಿನ ವಾಸಿಗಳಿಗೆ ಪರ್ಯಾಯ ಸ್ಥಳ ನೀಡಲು ಅಗತ್ಯ ಕ್ರಮವಹಿಸುವಂತೆ ಸಚಿವರು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರಿಗೆ ಸೂಚಿಸಿದರು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಎಂ.ಆರ್.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ ಅವರಿಂದ ಅಗತ್ಯ ಸಲಹೆ ಸೂಚನೆಯನ್ನು ಪಡೆಯಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಪ್ರಗತಿ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಪಡೆದು ಚರ್ಚಿಸಲಾಯಿತು.

ಎಸ್ಪಿ ಡಾ.ಬಿ.ಟಿ ಕವಿತಾ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಪಿಡಬ್ಲ್ಯುಡಿ ಎಇಇ ಚಿನ್ನಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net