

ಎನ್.ಆರ್.ಪುರ: ತಾಲೂಕಿನಾದ್ಯಂತ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಬೆಳೆ ಮತ್ತು ಪ್ರಾಣ ಹಾನಿ ಮಾಡುತ್ತಿರುವುದರಿಂದ ತುರ್ತಾಗಿ ಸೋಲಾರ್ ಟೆಂಟಕಲ್ ಫೆನ್ಸಿಂಗ್ ನಿರ್ಮಿಸಬೇಕು ಎಂದು ಕಡಹಿನಬೈಲು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಡಹಿನಬೈಲು ಗ್ರಾಪಂ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇಬ್ಬರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಕಾಡಾನೆಗಳು ನಾಡಿಗೆ ಬಾರದಂತೆ ಶಾಶ್ವತ ಪರಿಹಾರ ಕಲ್ಪಿಸಲು ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾರ್ಗದರ್ಶನದಲ್ಲಿ ಕಡಹಿನಬೈಲು ಗ್ರಾಪಂಗೆ ಸೇರಿದ ರೈತರ ತಂಡ ಮೂಡಿಗೆರೆ ತತ್ಕೊಳ ಮೀಸಲು ಅರಣ್ಯದಲ್ಲಿ ಕಾಡಾನೆ ಬಾರದಂತೆ ನಿರ್ಮಿಸಿರುವ ಸೋಲಾರ್ ಟೆಂಟಿಕಲ್ ಫೆನ್ಸಿಂಗ್ ಬೇಲಿಯನ್ನು ವೀಕ್ಷಣೆ ಮಾಡಿಕೊಂಡು ಬರಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಡಿಗೆರೆ ತಾಲೂಕಿನ ತತ್ಕೊಳ ಮೀಸಲು ಅರಣ್ಯದಲ್ಲಿ ಸೋಲಾರ್ ಟೆಂಟಕಲ್ ಫೆನ್ಸಿಂಗ್ ನಿರ್ಮಿಸಿ ಏಳು ವರ್ಷಗಳಾಗಿವೆ. ಇಲ್ಲಿವರೆಗೂ ಕಾಡಾನೆಗಳು ಬೇಲಿ ದಾಟಿ ನಾಡಿಗೆ ಬಂದಿಲ್ಲ. ಇದು 15 ಅಡಿ ಎತ್ತರವಿದೆ. ಪ್ರತಿ 6 ಕಿ.ಮೀ. ದೂರದವರೆಗೆ ಬೇಲಿ ನೋಡಿಕೊಳ್ಳಲು ಒಬ್ಬರನ್ನು ನೇಮಿಸಿದ್ದಾರೆ. ಬೇಲಿಯ ಒಂದು ಭಾಗದಲ್ಲಿ ಆನೆ ಕಂದಕ ಹಾಗೂ ಇನ್ನೊಂದು ಬದಿಯಲ್ಲಿ ರಸ್ತೆ ನಿರ್ಮಿಸಿದ್ದಾರೆ. ಮಳೆಗಾಲದಲ್ಲೂ ಸೋಲಾರ್ ಬೇಲಿ ಕೆಲಸ ಮಾಡುತ್ತಿದೆ. ಇದುವರೆಗೂ ಆನೆ ಆ ಬೇಲಿ ದಾಟಿಲ್ಲ. ಆಗಿನ ಕಾಲದಲ್ಲಿ 1 ಕಿ.ಮೀ. ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಲು 4 ಲಕ್ಷ ರೂ. ಬೇಕಾಗಿತ್ತು. ಈಗ 1 ಕಿ.ಮೀ.ಗೆ 8 ಲಕ್ಷ ರೂಪಾಯಿ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.
ಕಾಡಾನೆಗಳು ನಾಡಿಗೆ ಬಾರದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು 1 ಕಿ.ಮೀ.ಗೆ ಅಂದಾಜು 1 ಕೋಟಿ ರೂ. ಬೇಕಾಗಬಹುದು. ಟೆಂಟಕಲ್ ಬೇಲಿ ನಿರ್ಮಿಸಲು 1 ಕಿ.ಮೀ.ಗೆ ಕೇವಲ 8 ಲಕ್ಷ ರೂ. ಸಾಕು. ಅಲ್ಲದೆ ರೈಲ್ವೆ ಬ್ಯಾರಿಕೇಡ್ ಮಾಡಲು ದೀರ್ಘಾವಧಿ ಸಮಯ ಬೇಕು. ಅಲ್ಲಿಯವರೆಗೆ ಅಪಾರ ಬೆಳೆಹಾನಿ ಹಾಗೂ ಪ್ರಾಣಹಾನಿ ಸಂಭವವಿದೆ. ಆದ್ದರಿಂದ ಅರಣ್ಯ ಇಲಾಖೆ, ಶಾಸಕರು, ಜನಪ್ರತಿನಿಧಿಗಳು ತುರ್ತಾಗಿ ಟೆಂಟಕಲ್ ಫೆನ್ಸಿಂಗ್ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಎನ್.ಆರ್.ಪುರ ತಾಲೂಕಿನ ಮಾರಿದಿಬ್ಬದಿಂದ ಜೈಲ್ ಬಿಲ್ಡಿಂಗ್ ಮಾರ್ಗವಾಗಿ ಹೆನ್ನಂಗಿ-ಬೆಳ್ಳಂಗಿರೆಗೆ 80 ಕಿ.ಮೀ. ದೂರವಾಗಲಿದೆ. ತತ್ಕೊಳ ಮೀಸಲು ಅರಣ್ಯದಲ್ಲಿ ಮಾಡಿದ ರೀತಿಯಲ್ಲೇ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೋಲಾರ್ ಟೆಂಟಕಲ್ ಫೆನ್ಸಿಂಗ್ ಮಾಡಿಸಿಕೊಟ್ಟು ರೈತರ ಬೆಳೆ, ಪ್ರಾಣಹಾನಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ವ್ಯಾಪ್ತಿಯ ಪ್ರಗತಿಪರ ರೈತರಾದ ಎಸ್.ಡಿ.ರಾಜೇಂದ್ರ, ಗಾಂಧಿಗ್ರಾಮ ನಾಗರಾಜ, ಸೂಸಲವಾನಿ ರಂಜು, ಗುಳದಮನೆ ಸುಂದರೇಶ್, ಎಂ.ಕೆ.ಎಲ್ದೋಸ್, ಶೆಟ್ಟಿಕೊಪ್ಪ ಮಹೇಶ್ ಇದ್ದರು.