

ಚಿಕ್ಕಬಳ್ಳಾಪುರ: ಬೃಹತ್ ಮಾನವ ಸರಪಳಿ ನಿರ್ಮಿಸಿ ಸೆ.15 ರಂದು ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೀದರ್ ನಿಂದ ಚಾಮರಾಜನಗರದ ವರೆಗೆ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆ.15 ರಂದು ಬೆಳಿಗ್ಗೆ 8:30 ರಿಂದ 10.30 ಕ್ಕೆ ರಾಜ್ಯಾದಾದ್ಯಂತ ಏಕ ಕಾಲಕ್ಕೆ ಆಚರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ಜಿಲ್ಲೆಯಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಿಂದ ಕೋಲಾರ ಜಿಲ್ಲೆಯ ಗಡಿಯವರೆಗೆ ಒಟ್ಟು 65 ಕಿಲೋ ಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಾಗಿದೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳ ಸಹಕಾರ ಅಗತ್ಯ. ಹಾಗೆಯೇ ಇಲಾಖೆಗಳು ಅಗತ್ಯ ಸಿದ್ದತೆಗಳನ್ನು ಈಗಿನಿಂದಲೇ ಕೈಗೊಳ್ಳಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಾಗೆಯೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.