

ಕೆಜಿಎಫ್: ಚಿನ್ನದ ಗಣಿ ಪ್ರದೇಶದ ಕಾರ್ಮಿಕರ ಮತ್ತು ಅವರ ಅವಲಂಬಿತರು ನೂರಾರು ವರ್ಷಗಳಿಂದ ವಾಸಿಸುತ್ತಿರುವ ಮನೆಗಳನ್ನು ಅವರಿಗೇ ಸ್ವಂತಕ್ಕೆ ಖಾತೆ ಮಾಡಿಸಿಕೊಡಬೇಕು ಎಂದು ಕರ್ನಾಟಕ ಆದಿ ದ್ರಾವಿಡ ಸಂಘದ ಅಧ್ಯಕ್ಷ ಡಾ.ಆರ್.ಪ್ರಭುರಾಂ ಒತ್ತಾಯಿಸಿ, ನವದೆಹಲಿಯಲ್ಲಿ ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಕುಮಾರ್ ಬಾಜಪೇಯಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಕೆಜಿಎಫ್ನ ಭಾರತ್ ಚಿನ್ನದ ಗಣಿ ಪ್ರದೇಶದಲ್ಲಿರುವ ಬಿಜಿಎಂಎಲ್ ಕಂಪನಿಯ ಮನೆಗಳಲ್ಲಿ ಸುಮಾರು 100 ವರ್ಷಗಳಿಗೂ ಹೆಚ್ಚು ಕುಟುಂಬಗಳು ವಂಶ ಪಾರಂಪರ್ಯವಾಗಿ ವಾಸ ಮಾಡುತ್ತಿರುವ ಕಾರ್ಮಿಕರು ಮತ್ತು ಮಾಜಿ ಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸ್ವಂತ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ ಸುಮಾರು 4.68 ಲಕ್ಷ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಬಿಜಿಎಂಎಲ್ ಪ್ರದೇಶದಲ್ಲಿ ವಾಸವಿರುವವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟಾಗುವುದಿಲ್ಲ. ಹೊಸದಾಗಿ ಜಾಗ ಹುಡುಕುವ ಪ್ರಯತ್ನ ಅಗತ್ಯವಿರುವುದಿಲ್ಲ. ನೂರಾರು ವರ್ಷಗಳಿಂದ ವಾಸವಿರುವ ಬಿಜಿಎಂಎಲ್ ಗಣಿ ಕಾರ್ಮಿಕರ, ಮಾಜಿ ನೌಕರರ ಕುಟುಂಬಗಳು ತಮ್ಮ ಬದುಕನ್ನು ಹುಟ್ಟಿ ಬೆಳೆದ ಸ್ಥಳದಲ್ಲಿಯೇ ಮುಂದುವರಿಸಲು ಅವಕಾಶವಾಗುತ್ತದೆ. ಈ ಕಾರಣಗಳನ್ನು ಮುಂದಿಟ್ಟು ಈ ಚಳವಳಿಯ ಮುಖಾಂತರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೂಡ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.