ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ನಿರ್ಮಿಸಿ ; ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯ

TMK Mla
Published on

ತುಮಕೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪರ್ವವನ್ನು ಇಡೀ ವಿಶ್ವವೇ ಕೊಂಡಾಡುತ್ತಿದ್ದು, ಇಂತಹ ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ತುಮಕೂರು ನಗರದಲ್ಲಿ ನಿರ್ಮಾಣ ಮಾಡಬೇಕು. ನಾಡಿಗೆ ಶಿಕ್ಷಣ, ಅನ್ನದಾಸೋಹ ನೀಡಿರುವ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಯನ್ನೂ ನಿರ್ಮಿಸಬೇಕೆಂಬುದು ನಮ್ಮೆಲ್ಲರ ಆಶಯ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 511ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಮಹಾನಗರ ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ. ಅವರ ದೂರದೃಷ್ಟಿ, ಆಡಳಿತ ವೈಖರಿ ಪ್ರಶಂಸನೀಯ ಎಂದರು. ಕೆಂಪೇಗೌಡರ ಬಗ್ಗೆ ಎಷ್ಟು ಅಭಿಮಾನ, ಸ್ವಾಭಿಮಾನ ಇಟ್ಟುಕೊಂಡಿದ್ದೇವೋ ಅದೇ ರೀತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಸ್ವರೂಪದಲ್ಲಿ ನಾವು ದೇವರನ್ನು ಕಾಣುತ್ತಿದ್ದೇವೆ ಎಂದರು.

ತುಮಕೂರಿನ ಟೌನ್‌ಹಾಲ್ ವೃತ್ತಕ್ಕೆ ಬಿಜಿಎಸ್ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ನಿರ್ಮಿಸುವುದರ ಜತೆಗೆ ಪಾಲಿಕೆ ಆವರಣದಲ್ಲಿರುವ ಉದ್ಯಾನವನದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲು ಮೇಯರ್‌ಗೆ ಮನವಿ ಸಲ್ಲಿಸಲಾಗಿದೆ. ಜುಲೈನಲ್ಲಿ ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ, ಸದಸ್ಯರು ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಜಾಗ ಅಂತಿಮಗೊಳಿಸಲಾಗುವುದು ಎಂದರು.

ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ , ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಆರ್.ದೇವರಾಜು, ಮಹಾಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಪ್ರೆಸ್ ರಾಜಣ್ಣ, ವೆಂಕಟೇಶ್‌ಗೌಡ, ಮಹಿಳಾ ಘಟಕದ ಅಧ್ಯಕ್ಷೆ ತಾಹೆರಾ ಕುಲ್ಸುಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net