ಆನೆ ಕಾರಿಡಾರ್ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಿ

18blrp3-aowmya
ಸೌಮ್ಯಾ ಆನಂದ್
Published on

ಬೇಲೂರು: ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳಿಂದ ರೈತರು ಬೆಳೆ ನಷ್ಟ ಅನುಭವಿಸುತಿದ್ದು, ಶಾಸಕರು ಹಾಗೂ ಜಿಲ್ಲಾಧಿಕಾರಿ ಇತ್ತ ಗಮನ ಹರಿಸಿ ತಾಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಿಸಿ ಶಾಶ್ವತವಾಗಿ ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಒತ್ತಾಯಿಸಿದರು.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗುವ ಮುನ್ನ ಶಾಸಕರು, ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಈ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದು ಶಾಶ್ವತ ಪರಿಹಾರಕ್ಕೆ ಮುಂದಾಗುವಂತೆ ಸಂಸದರಿಗೂ ಮನವಿ ಮಾಡಿದ್ದೇವೆ. ಆನೆಗಳ ಉಪಟಳದ ವಿಚಾರವಾಗಿ ಮುಖ್ಯಮಂತ್ರಿ ಅವರಿಗೆ ಸಧ್ಯದಲ್ಲೇ ಮನವಿ ಸಲ್ಲಿಸಲಾಗುವುದು. ಶಾಸಕರು ಬೇಲೂರಿನಲ್ಲಿರದ ಮತ್ತು ಸಮಸ್ಯೆಗಳ ಬಗ್ಗೆ ಗಮನ ಹರಿಸದ ಕಾರಣ ಕಾಡಾನೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಲೂಕು ಕೆಡಿಪಿ ಸದಸ್ಯ ಚೇತನ್.ಸಿ.ಗೌಡ ಮಾತನಾಡಿ, ಕಳೆದ ತಿಂಗಳು ಶಾಸಕರು ಡಿಎಫ್‌ಒ, ಆರ್ ಎಫ್‌ಒ ಮತ್ತು ಬಿಕ್ಕೋಡು ಬಾಗದ ರೈತರ, ಸಾರ್ವಜನಿಕರ ಸಭೆ ಕರೆದು ಮುಂದಿನ ಏಳು ದಿನಗಳಲ್ಲಿ ಕಾಡಾನೆಗಳನ್ನು ಓಡಿಸಲಾಗುವುದು. ಇಲ್ಲದಿದ್ದಲ್ಲಿ ರೈತರೊಂದಿಗೆ ಪ್ರತಿಭಟಿಸೋಣ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ತಿಂಗಳು ಕಳೆದರೂ ಪರಿಹಾರವಾಗಿಲ್ಲ. ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಹೇಳತೀರದಾಗಿದೆ. ಗುರುವಾರ ರಾತ್ರಿ ಕೊತ್ತನಹಳ್ಳಿ ಗ್ರಾಮದ ಬೀದಿಗಳಲ್ಲಿ 18ಕ್ಕೂ ಹೆಚ್ಚು ಕಾಡಾನೆಗಳು ಓಡಾಡಿ ಜನರಲ್ಲಿ ಭಯ ಹುಟ್ಟಿಸಿವೆ. ಶಾಸಕರು ಕಾಡಾನೆ ಸಮಸ್ಯೆ ನಿವಾರಿಸಲು ಸಭೆ ಕರೆದು ಚರ್ಚಿಸಿ ಮುಂದಿನ ಒಂದು ವಾರದಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಅಲ್ಲದೆ ಶಾಸಕರು ಬೇಲೂರಿನಲ್ಲಿ ಪ್ರತಿಭಟಿಸುವುದಕ್ಕಿಂದ ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆಗೆ ಮುಂದಾಗಲಿ. ನಾವು ಶಾಸಕರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಇಲ್ಲದಿದ್ದಲ್ಲಿ ರೈತರು, ಸಾರ್ವಜನಿಕರೊಂದಿಗೆ ಸೇರಿ ಶಾಸಕರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಗಿಲಮನೆ ಗ್ರಾಪಂ ಅಧ್ಯಕ್ಷ ಶಿವಕುಮಾರ್, ತಾಲೂಕು ಕೆಡಿಪಿ ಸದಸ್ಯರಾದ ಜ್ಯೋತಿ, ನಂದೀಶ್, ರೈತ ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net