ಸಂಸ್ಕರಣಾ ಘಟಕ ನಿರ್ಮಿಸಿ

1
ದೊಡ್ಡಬಳ್ಳಾಪುರದಲ್ಲಿ ರೇಷ್ಮೆ ಬಣ್ಣ ಮಾಡುವ ಘಟಕಗಳಿಗೆ ಬಣ್ಣದ ನೀರು ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿ ನೇಕಾರರ ಹೋರಾಟ ಸಮಿತಿ ವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಗೆ ಮನವಿ ಸಲ್ಲಿಸಲಾಯಿತು. ನೇಕಾರರ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಜಿ.ಗೋಪಾಲ್, ಎನ್.ಲೋಕೇಶ್, ಉಪಾಧ್ಯಕ್ಷರಾದ ಎಸ್.ಎನ್.ಶಿವರಾಂ ಸಂಜೀವಪ್ಪ, ಕಾರ‌್ಯದರ್ಶಿ ರಮೇಶ್ ರೆಡ್ಡಿ, ಖಜಾಂಚಿ ರಂಗಸ್ವಾಮಿ ಇತರರು ಇದ್ಧರು.
Published on

ನಗರಸಭೆ ನೋಟಿಸ್‌ಗೆ ಆಕ್ಷೇಪ- ಪೌರಾಯುಕ್ತರಿಗೆ ನೇಕಾರರಿಂದ ಒತ್ತಾಯ

ದೊಡ್ಡಬಳ್ಳಾಪುರ: ನಗರದಲ್ಲಿ ರೇಷ್ಮೆಬಣ್ಣ ಮಾಡುವ ಘಟಕಗಳು ಮಾಲಿನ್ಯಕಾರಕ ಎಂದು ನಗರಸಭೆಯಿಂದ ನೋಟಿಸ್ ನೀಡಿ ಘಟಕಗಳನ್ನು ಮುಚ್ಚಲು ಹೊರಟಿರುವ ಕ್ರಮದಿಂದ ನೇಕಾರಿಕೆ ಸಂಕಷ್ಟ ಎದುರಾಗಲಿದ್ದು, ನಗರಸಭೆಯಿಂದ ರೇಷ್ಮೆ ಮತ್ತು ಕೃತಕ ರೇಷ್ಮೆ ಬಣ್ಣ ಮಾಡುವ ಘಟಕಗಳಿಗೆ ಬಣ್ಣದ ನೀರು ಸಂಸ್ಕರಣಾ ಘಟಕ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನೇಕಾರರು ಹಾಗೂ ಬಣ್ಣದ ಘಟಕಗಳ ಮಾಲೀಕರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ, ಕೆಲವು ವರ್ಷಗಳಿಂದ ರೇಷ್ಮೆ ಬಣ್ಣ ಮಾಡಿದ ನೀರು ಕೆರೆಗಳಿಗೆ ಸೇರಿ ಕೆರೆಯ ನೀರು ಮಲೀನವಾಗುತ್ತಿದೆ ಎಂದು ನಗರಸಭೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯವರು ಬಣ್ಣ ಮಾಡುವ ಘಟಕದ ಮಾಲೀಕರಿಗೆ ನೋಟಿಸ್ ನೀಡುವುದರ ಮೂಲಕ ಎಚ್ಚರಿಕೆ ಕೊಡುತ್ತಿದ್ದು, ಕಳೆದ ವಾರ ಅಂತಿಮ ನೋಟಿಸ್ ನೀಡಲಾಗಿದೆ. ಇದು ಹೀಗೆ ಮುಂದುವರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ರೇಷ್ಮೆ ಬಣ್ಣ ಮಾಡುವ ಘಟಕಗಳು ಏಳೆಂಟು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಬಣ್ಣದ ಘಟಕಗಳಿಂದ ಬಣ್ಣ ಹಚ್ಚಿದ ರೇಷ್ಮೆ ಮತ್ತು ಕೃತಕ ರೇಷ್ಮೆ ಸೀರೆ ನೇಯಲು ಉಪಯೋಗಿಸುತ್ತಿದ್ದರು. ದೊಡ್ಡಬಳ್ಳಾಪುರ ನಗರದಲ್ಲಿ ಸಾವಿರಾರು ಮಗ್ಗಗಳು ಇದರ ಮೇಲೆ ಅವಲಂಬಿತವಾಗಿದೆ. ಬಣ್ಣ ಘಟಕದ ಮಾಲೀಕರು ಸ್ವಂತ ಮನೆ ಮತ್ತು ಭೂಮಿ ಹೊಂದಿರುವುದಿಲ್ಲ. ಬಹು ಪಾಲು ಜನ ನೆರೆ ರಾಜ್ಯಗಳಿಂದ ಬಂದು ಇಲ್ಲಿ ಜೀವನೋಪಾಯಕ್ಕಾಗಿ ಈ ವೃತ್ತಿಯಲ್ಲಿ ನಿರತರಾಗಿದ್ದಾರೆ. ಇವರೆಲ್ಲ ಬಡವರಾಗಿದ್ದು, ಬಾಡಿಗೆ ಮನೆಯಲ್ಲಿ ಮತ್ತು ಬಾಡಿಗೆ ಜಾಗದಲ್ಲಿ ಜೋಪಡಿಗಳನ್ನು ಹಾಕಿಕೊಂಡು ವೃತ್ತಿ ನಡೆಸುತ್ತಿದ್ದಾರೆ ಎಂದರು.

ಬಣ್ಣದ ಘಟಕದ ಮಾಲೀಕ ನಟರಾಜ್, ಸಾಯಿರಾಂ ಮಾತನಾಡಿ, ರೇಷ್ಮೆ ಬಣ್ಣ ಮಾಡುವ ಘಟಕಗಳು ಗುಡಿ ಕೈಗಾರಿಕೆಯಾಗಿದೆ, ಇದು ಸಹ ನೇಕಾರಿಕೆಯ ಒಂದು ಅಂಗವಾಗಿದೆ. ಮುಖ್ಯವಾಗಿ ಇದರಲ್ಲಿ ಯಾವುದೇ ಅಪಾಯಕರ ರಾಸಾಯನಿಕಗಳು ಇಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದರು.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಕಳೆದ ಎಪ್ಪತ್ತೈದು ವರ್ಷಗಳಿಂದ ನಡೆಯುತ್ತಿದ್ದು ಇಷ್ಟು ವರ್ಷಗಳು ಬಣ್ಣ ತೊಳೆದ ನೀರಿನಿಂದ ಪರಿಸರ ಮಾಲಿನ್ಯ ಆಗದೇ ಇರುವುದು ಈಗ ಪರಿಸರ ಮಾಲಿನ್ಯದ ಪ್ರಶ್ನೆ ಮುಂದಿಟ್ಟ ಇಲಾಖೆಗಳು ನಮಗೆ ತೊಂದರೆ ಕೊಡುತ್ತಿರುವುದು ನೋಡಿದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಆಕ್ಷೇಪ ವ್ಯಕ್ತಪಡಿಸಿದರು. ನಗರದಲ್ಲಿ ನಿತ್ಯ ಕೆಲಸ ಮಾಡುವ ಐದಾರು ಘಟಕಗಳಿವೆ. ಇನ್ನು ಇಲ್ಲಿಂದ ಹೊರಬರುವ ತ್ಯಾಜ್ಯ ನೀರು ಮೂಲಕ ಎಂಟು ಕಿ.ಮೀ ದೂರದಲ್ಲಿರುವ ಕೆರೆಗೆ ಹೋಗುತ್ತದೆ ಎಂಬ ವಾದವು ಸರಿಯಿಲ್ಲ. ಚಿಕ್ಕತುಮಕೂರು ಕೆರೆಗೆ ಕೈಗಾರಿಕಾ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ರೇಷ್ಮೆ ಬಣ್ಣದ ಘಟಕಗಳ ಪ್ರಮಾಣ ತೀರ ಅಲ್ಪವಾಗಿದೆ. ಘಟಕಗಳಿಂದ ಬಣ್ಣದ ನೀರನ್ನು ಸಂಸ್ಕರಿಸಿ ಕಾಲುವೆಗೆ ಬಿಡಿಯೆಂದು ಅಧಿಕಾರಿಗಳು ಹೇಳುತ್ತಿದ್ದು, ಸಂಸ್ಕರಣಾ ಘಟಕಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಇಲಾಖೆಗಳು ಒಂದೇ ಕಡೆ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು. ಡಿಸಿ ಸಭೆಯ ಆದೇಶದಂತೆ ಕ್ರಮ: ಕೆರೆ ಮಲಿನವಾಗುತ್ತಿರುವ ಕುರಿತು ದೂರುಗಳ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ರೇಷ್ಮೆ ಬಣ್ಣದ ಘಟಕಗಳ ಮಾಲಿನ್ಯ ಪ್ರಮಾಣ ಕಡಿಮೆಯಿದೆ ಎನ್ನುವುದಕ್ಕೆ ವೈಜ್ಞಾನಿಕವಾಗಿ ಸಾಬೀತಾಗುವಂತೆ ಪರೀಕ್ಷೆ ನಡೆಸಲಾಗುವುದು. ನೇಕಾರರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net